ಹಾವೇರಿಯಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಏಕಾಏಕಿ ಕುಸಿದು ಬಿದ್ದು ಅಸು ನೀಗಿದೆ. ಕುಸಿದು ಬಿದ್ದ ಮಗುವನ್ನು ಪೋಷಕರು ಹಾವೇರಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಇರಲಿಲ್ಲ.
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದ್ದಾಗಿ ಪೋಷಕರು ಆರೋಪ ಮಾಡಿದ್ದು, ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿದ್ದು, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಭವಾನಿ, ಮಹೇಶ್ ಕಿಳ್ಳಿಕ್ಯಾತರ್ ದಂಪತಿಯ ಹೆಣ್ಣು ಮಗು ಮನೆಯಲ್ಲಿ ಆಟವಾಡುತ್ತಿದ್ದಾ ಕುಸಿದು ಬಿದ್ದಿದೆ. ಹಾವನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ವೈದ್ಯರಿಲ್ಲದ ಕಾರಣ ಗುತ್ತಲ ಆಸ್ಪತ್ರೆಗೆ ಹೋಗಬೇಕಾದರೆ ಮಗು ಮೃತಪಟ್ಟಿದೆ.
ಜೋಕಾಲಿ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು
ಚಿಕ್ಕೋಡಿಯ ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಸೀರೆಯ ಜೋಕಾಲಿ ಆಟವಾಡುತ್ತಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆಗೆ ಬಿಗಿದು ಮೃತಪಟ್ಟಿರುವ ಘಟನೆ ನಡೆದಿದೆ. ಶುಭ್ರಾ ಯುವರಾಜ್ ರಾವುತ್ ಪಾಟೀಲ್ (14) ಮೃತಪಟ್ಟ ಬಾಲಕಿ. ನಿಪ್ಪಾಣಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹತ್ತು ರೂಪಾಯಿ ವಿಚಾರದ ಜಗಳ ಕೊಲೆಯಲ್ಲಿ ಕೊನೆ
ರಾಯಚೂರುತಾಲೂಕಿನ ಹಂಚಿನಾಳ ಕ್ಯಾಂಪ್ ಬಳಿ ಪೆಟ್ರೋಲ್ ಬಂಕ್ನಲ್ಲಿ 10 ರೂ.ಗೆ ಶುರುವಾದ ಜಗಳ ಕೊಲೆಯಲ್ಲಿ ಕೊನೆಗೊಂಡಿದ್ದು, ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳ ಬಿಡಿಸಲು ಹೋದ ಗಿಲ್ಲೆಸುಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೇಘನಾಥ್ (42) ಕೊಲೆಯಾದ ವ್ಯಕ್ತಿ. ಪೆಟ್ರೋಲ್ ಬಂಕ್ ಸಿಬ್ಬಂದಿ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್, ಪ್ರವೀಣ ಬಂಧಿತ ಆರೋಪಿಗಳು.
ಮಹೇಶ್, ನಾಗರಾಜ್ ಎಂಬವರು ಬಾಟಲಿಯಲ್ಲಿ 110 ರೂ. ಪೆಟ್ರೋಲ್ ಹಾಕಿಸಿಕೊಂಡು 100 ರೂ. ಕೊಟ್ಟಿದ್ದು, ಬಾಕಿ 10 ರೂ.ಗಾಗಿ ಕ್ ಸಿಬ್ಬಂದಿ ಜೊತೆ ಜಗಳ ಮಾಡಿಕೊಂಡಿದ್ದಾರೆ. ಮೇಘನಾಥ್ ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾಗಿದ್ದಾಗ ಈ ದುರಂತ ನಡೆದಿದೆ.


