Menu

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 41ಕ್ಕೆ ಏರಿಕೆ

ಭಾರಿ ಪ್ರವಾಹದಿಂದಾಗಿ ಅಸ್ಸಾಂನ 11 ಜಿಲ್ಲೆಗಳ 6.53 ಲಕ್ಷಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಒಂದೇ ದಿನದಲ್ಲಿ 10 ಜನ ಮೃತಪಟ್ಟಿದ್ದಾರೆ. ಈ ಮೂಲಕ ಆ ರಾಜ್ಯದಲ್ಲಿ ಪ್ರವಾಹದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಅಸ್ಸಾಂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕೋಟಾ, ತುರ್ತು ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಚುರುಕುಗೊಳಿಸುವಂತೆ ಹಾಗೂ ಪರಿಹಾರ ಸಾಮಗ್ರಿಗಳ ವಿತರಣೆಯಲ್ಲಿ ಯಾವುದೇ ಅಡಚಣೆ ಆಗದಂತೆ
ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಪರಿಹಾರ ಕಾರ್ಯಾಚರಣೆಗಳ ಪರಾಮರ್ಶೆ ನಡೆಸಿದ ಮುಖ್ಯ ಕಾರ್ಯದರ್ಶಿ, ಇಲಾಖೆಗಳು
ಯಾವುದೇ ಅಡೆತಡೆಯಿಲ್ಲದೆ ಪರಿಹಾರ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಸೂಚಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ದುರಸ್ತಿ ಹಾಗೂ ಪುನಶ್ಚೇತನ ಕಾರ್ಯಗಳನ್ನುತ್ವರಿತಗೊಳಿಸಬೇಕು. ಪರಿಹಾರ ಶಿಬಿರಗಳು ಮತ್ತು ಸಂತ್ರಸ್ತರ ಕೇಂದ್ರಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಅಗತ್ಯ ಸೇವೆಗಳು ಹಾಗೂ ಪರಿಹಾರ ಸಾಮಗ್ರಿಗಳು ನೊಂದವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.

ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು ಮತ್ತು ಪ್ರವಾಹ ಸಂತ್ರಸ್ತರ ಕಷ್ಟಗಳಿಗೆ ತ್ವರಿತ ಸ್ಪಂದನೆ ಸಿಗಬೇಕು ಎಂದು ರವಿ ಕೋಟಾ ಹೇಳಿದ್ದಾರೆ. ಶಿವಸಾಗರ, ಚರೈದೇವ್, ಧೆಮಾಜಿ, ದಿಬ್ರುಗಢ, ಗೋಲಾಘಟ್, ಹೊಜಾಯ್, ಜೋರ್ಹತ್, ಕಾಮರೂಪ್, ಕಾಮರೂಪ್ ಮೆಟ್ರೋಪಾಲಿಟನ್, ಕಾರ್ಬಿ ಆಂಗ್ಲಾಂಗ್ ಮತ್ತಿತರ ಜಿಲ್ಲೆಗಳಲ್ಲಿ ಒಟ್ಟು 6,53,100ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ಪ್ರಾಧಿಕಾರದ ದೈನಂದಿನ ವರದಿ ತಿಳಿಸಿದೆ.

ಮುಂದಿನ ನಾಲ್ಕು ದಿನ ಅಲ್ಲಲ್ಲಿ ಗುಡುಗು, ಮಿಂಚು ಹಾಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಅಸ್ಸಾಂನಲ್ಲಿ ಆಡಳಿತವು ತುರ್ತು ದುರಸ್ತಿ ಕಾರ್ಯಗಳು, ಪರಿಹಾರ ಸರಬರಾಜು ಮತ್ತು ಇಲಾಖೆಗಳ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

Related Posts

Leave a Reply

Your email address will not be published. Required fields are marked *