ದೆಹಲಿಯ ಸತ್ಯನಿಕೇತನ್ ಪ್ರದೇಶದಲ್ಲಿ ಭಾನುವಾರ ಯುವಕರ ಪಿಜಿ ಕಟ್ಟವೊಂದು ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಹನ್ನೊಂದು ಮಂದಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.
ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಬಾಲಕರ ಪಿಜಿ ವಸತಿ ಕಟ್ಟಡ ಕುಸಿದು ಈ ದುರಂತ ಸಂಭವಿಸಿದೆ.
ಕಟ್ಟಡ ಕುಸಿದ ಬಳಿಕ ದೆಹಲಿ ಪೊಲೀಸ್, ಎನ್ಡಿಆರ್ಎಫ್, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. 200 ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಹಲವು ದಿನಗಳಿಂದ ಕಟ್ಟಡದ ನೆಲಮಾಳಿಗೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮಳೆಗೆ ನೀರು ಸಂಗ್ರಹಗೊಂಡಿತ್ತು. ಹೀಗಾಗಿ ಕಟ್ಟಡದ ಅಡಿಪಾಯ ದುರ್ಬಲಗೊಂಡು
ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿ, ಕಟ್ಟಡದ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಕಟ್ಟಡದ ಮಾಲೀಕರು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


