ನೀಟ್ ಅಕ್ರಮದ ಕುರಿತು ಲೋಕಸಭೆಯಲ್ಲಿ ಮಾತಾಡಬೇಕಾದ ರಾಹುಲ್ ಗಾಂಧಿ ಪಲಾಯನ ಮಾಡಿ ಕಾಕ್ರೋಚ್ ಜನತಾ ಪಾರ್ಟಿಯ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಆ ಪಾರ್ಟಿಯವರು ಸಂಧಾನಕ್ಕೆ ಬರುತ್ತಿಲ್ಲ, ರಾಹುಲ್ ಗಾಂಧಿ ಅಧಿವೇಶನಕ್ಕೆ ಬರುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತಾಡಿ ಜನರಿಗೆ ನಿಜವಾದ ವಿಚಾರವನ್ನು ತಿಳಿಸಿಕೊಡಬೇಕು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತಾಡುವುದು ಬಿಟ್ಟು ಪಲಾಯನ ಮಾಡಿದ್ದಾರೆ. ಲೋಕಸಭೆಯಲ್ಲಿ ಉತ್ತರ ಸಿಗದಿದ್ದರೆ ಹೋರಾಟ ಮಾಡಬೇಕು. ಕಾಕ್ರೋಚ್ ಪಾರ್ಟಿಯವರು ಸಂಧಾನ ಮಾಡಲು ಬರಲ್ಲ, ರಾಹುಲ್ ಗಾಂಧಿ ಲೋಕಸಭೆಗೆ ಬರಲ್ಲ. ರಾಹುಲ್ ಗಾಂಧಿ ಜಿರಳೆ ಪಾರ್ಟಿಯ ಜೊತೆ ಹೊಂದಾಣಿಕೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದರು.
ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕೂಗಿದ್ದ ಘೋಷಣೆಯನ್ನೇ ಕೂಗಲಾಗಿದೆ. ಇದನ್ನು ಆಯೋಜಿಸಿರುವವರ ವಿದೇಶದಲ್ಲಿದ್ದು, ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ರಾಹುಲ್ ಗಾಂಧಿ ಇದರಲ್ಲಿ ಶಾಮೀಲಾಗಿದ್ದಾರೆ. ಕಾಂಗ್ರೆಸ್ ಅವಧಿಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಆಗ ಕಾಂಗ್ರೆಸ್ ಏನು ಮಾಡಿತ್ತು ಎಂದು ತಿಳಿಸಲಿ. ಇವೆಲ್ಲವನ್ನೂ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
ಕೆಪಿಎಸ್‌ಸಿಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಿಯಾಗಿ ಭಾಷಾಂತರ ಮಾಡುವ ವ್ಯವಸ್ಥೆ ಇಲ್ಲ. ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಾಗ ಅದಕ್ಕೆ ಪರಿಹಾರ ನೀಡಲಿಲ್ಲ. ಯುಪಿಎ ಯುಪಿಎ ಆಡಳಿತದ ಅವಧಿಯಲ್ಲಿ AIIMS, AIEEE, CPMT ಸೇರಿದಂತೆ ಹಲವು ರಾಷ್ಟ್ರೀಯ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದಿದ್ದವು. ಆಗ ಕಾಂಗ್ರೆಸ್ ವ್ಯವಸ್ಥೆಯನ್ನು ಸುಧಾರಿಸಿತೇ? ತಪ್ಪಿತಸ್ಥರ ವಿರುದ್ಧ ಇಷ್ಟು ಕಠಿಣ ಕ್ರಮ ಕೈಗೊಂಡಿತೇ? ಆಗ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ರಾಜೀನಾಮೆ ನೀಡಿರಲಿಲ್ಲ. ಈಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆ ಕೇಳಲಾಗುತ್ತಿದೆ ಎಂದರು.
ಕಾಂಗ್ರೆಸ್‌ಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಬೇಕಾಗಿರುವುದು ರಾಜಕೀಯ ಲಾಭ ಮಾತ್ರ. ನೀಟ್ ಪರೀಕ್ಷೆಯಲ್ಲಿ ಕೆಲವು ಅಕ್ರಮಗಳ ಆರೋಪ ಕೇಳಿಬಂದ ಕ್ಷಣದಿಂದಲೇ ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೆ ತನಿಖೆಗೆ ಆದೇಶಿಸಿತು. ಪ್ರಕರಣವನ್ನು CBI ಗೆ ವಹಿಸಿತು. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಅಗತ್ಯವಿದ್ದ ಕಡೆ ಮರುಪರೀಕ್ಷೆ ನಡೆಸಿ, ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಭದ್ರಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ 11 ಯುವಜನರು ಸತ್ತಾಗ ಅದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಿಲ್ಲ. ಪ್ರಧಾನಿಗಳು ಸಿಬಿಐ ತನಿಖೆ ಮಾಡಿಸಿ ಎಲ್ಲರನ್ನೂ ಜೈಲಿಗೆ ಹಾಕಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. 11 ಮಕ್ಕಳ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಲಾಗಿದೆ. ಆ 11 ಕುಟುಂಬಗಳ ಕಣ್ಣೀರಿನ ಹೊಣೆ ಯಾರು ಹೊರುತ್ತಾರೆ? ಇಷ್ಟು ದೊಡ್ಡ ದುರಂತ ನಡೆದರೂ ಮುಖ್ಯಮಂತ್ರಿ ರಾಜೀನಾಮೆ ಕೊಡಲಿಲ್ಲ. ಉಪಮುಖ್ಯಮಂತ್ರಿ ರಾಜೀನಾಮೆ ಕೊಡಲಿಲ್ಲ. ಗೃಹ ಸಚಿವರು ರಾಜೀನಾಮೆ ಕೊಡಲಿಲ್ಲ. 11 ಯುವಕರ ಸಾವಿನ ಮೇಲೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವ ಸರ್ಕಾರ ಇಂದು ಯಾವ ನೈತಿಕತೆ ಇದೆ ಅಂತ ಯುವಕರ ಬಗ್ಗೆ ಮಾತನಾಡುತ್ತಿದೆ ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಮೊದಲು ಸಿದ್ದರಾಮಯ್ಯ ಹಾಗೂ ಸಿಎಂ ಡಿಕೆ ಶಿವಕುಮಾರ್ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು. ಧಾರವಾಡದಲ್ಲಿ ಉದ್ಯೋಗಕ್ಕಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಿರುದ್ಯೋಗಿ ಯುವಕರ ಮೇಲೆ ಲಾಠಿ ಚಾರ್ಜ್ ಮಾಡಿದವರು ಯಾರು? ಉದ್ಯೋಗ ಕೇಳಿದ ಯುವಕರಿಗೆ ಉತ್ತರವಾಗಿ ಲಾಠಿ ಕೊಟ್ಟ ಸರ್ಕಾರಕ್ಕೆ ಇಂದು ಯುವಕರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ನೇಮಕಾತಿ ಇಲ್ಲ. ಪರೀಕ್ಷೆಗಳು ಸಮಯಕ್ಕೆ ನಡೆಯುವುದಿಲ್ಲ. ಯುವಕರ ಭವಿಷ್ಯ ಅತಂತ್ರವಾಗಿದೆ. ತನ್ನದೇ ರಾಜ್ಯದ ಯುವಕರಿಗೆ ನ್ಯಾಯ ಕೊಡಲಾರದ ಸರ್ಕಾರ ಇಂದು ದೇಶಕ್ಕೆ ಉಪದೇಶ ಕೊಡಲು ಹೊರಟಿದೆ ಎಂದರು.
ರಾಷ್ಟ್ರೀಯ ಪರೀಕ್ಷೆಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ತನ್ನ ಕೆಪಿಎಸ್‌ಸಿಯನ್ನು ಸರಿಪಡಿಸಬೇಕು. ಒಂದೇ ಒಂದು ಕೆಪಿಎಸ್‌ಸಿ ಪರೀಕ್ಷೆಯನ್ನು ಕೂಡ ದೋಷ ರಹಿತವಾಗಿ ನಡೆಸಲು ಸಾಧ್ಯವಾಗಲಿಲ್ಲ. ಪ್ರಶ್ನೆಪತ್ರಿಕೆ, ಭಾಷಾಂತರದ ಎಡವಟ್ಟುಗಳು, ಆಡಳಿತದ ನಿರ್ಲಕ್ಷ್ಯ—ಇವೆಲ್ಲದರಿಂದ ಅಭ್ಯರ್ಥಿಗಳು ಮತ್ತೆ ಮತ್ತೆ ರಸ್ತೆಗಿಳಿಯಬೇಕಾಯಿತು. ಕೆಪಿಎಸ್‌ಸಿ ಪೂರ್ವ ಮರು ಪರೀಕ್ಷೆ ಎರಡೆರಡು ಬಾರಿ ನಡೆಸುವ ಪರಿಸ್ಥಿತಿ ಏಕೆ ಬಂದು, ಲಕ್ಷಾಂತರ ಅಭ್ಯರ್ಥಿಗಳ ಸಮಯ, ಹಣ, ಶ್ರಮ ಮತ್ತು ವಯಸ್ಸಿನ ಜೊತೆ ಚೆಲ್ಲಾಟವಾಡಲಾಗಿತ್ತು. ಕರ್ನಾಟಕದ ಯುವಕರ ಬದುಕನ್ನು ಹಾಳು ಮಾಡಿದವರು ಯಾರು ಎಂಬುದನ್ನು ಜನ ಮರೆತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಪ್ರಶ್ನಿಸುವ ಮೊದಲು ಕಾಂಗ್ರೆಸ್‌ನ ಆಡಳಿತದ ವೈಫಲ್ಯಗಳಿಗೆ ಉತ್ತರ ಕೊಡಬೇಕು. ಕರ್ನಾಟಕದಲ್ಲಿ ಯುವಕರ ಕೈಗೆ ಉದ್ಯೋಗ ಕೊಡಲಿಲ್ಲ, ಪರೀಕ್ಷೆಗಳನ್ನು ಸರಿಯಾಗಿ ನಡೆಸಲಿಲ್ಲ, ಪ್ರತಿಭಟಿಸಿದ ಯುವಕರ ಬೆನ್ನಿಗೆ ಲಾಠಿ ಬೀಸಲಾಗಿದೆ. 11 ಅಮಾಯಕ ಯುವಕರ ಜೀವ ಬಲಿಯಾದರೂ ನೈತಿಕ ಹೊಣೆ ಹೊತ್ತಿಲ್ಲ. ಇಂತಹ ಸರ್ಕಾರಕ್ಕೆ ದೇಶದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕೂ ಇಲ್ಲ. ಮೊದಲು ನಿಮ್ಮ ಮನೆಯನ್ನೇ ಸರಿಪಡಿಸಿಕೊಳ್ಳಿ, ನಂತರ ದೇಶಕ್ಕೆ ಪಾಠ ಮಾಡಲು ಬನ್ನಿ ಎಂದು ಹೇಳಿದರು.
ಬಿಜೆಪಿ ಕಚೇರಿಯ ಮುಂದೆ ಅನೇಕ ಬಾರಿ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಾಗಲೂ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿರಲಿಲ್ಲ. ಪೊಲೀಸರು ಕಾಂಗ್ರೆಸ್‌ನ ಪರವಾಗಿ ನಿಂತಿದ್ದಾರೆ. ಈ ದ್ವಂದ್ವವನ್ನು ಪೊಲೀಸರು ಆಯುಕ್ತರು ಕೈ ಬಿಡಬೇಕು. ಆಯುಕ್ತರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಬಿಜೆಪಿ ಶಾಸಕರ ಮೇಲೆಯೇ ಮೊಟ್ಟೆ ಬಿದ್ದಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.


