ಪುನರಾವರ್ತಿತ ಮತ್ತು ದತ್ತಾಂಶ ಆಧಾರಿತ ಕೆಲಸಗಳನ್ನು ಮಾಡುವಲ್ಲಿ ಎಐ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಆದರೆ ಇದಕ್ಕೆ ಮಾನವ ಸಹಜವಾದ ಸಹಾನುಭೂತಿ,ಸಂದರ್ಭೋಚಿತ ನಿರ್ಧಾರ ಸಾಮರ್ಥ್ಯ, ಆಳವಾದ ಅಂತಃಪ್ರಜ್ಞೆ ಮತ್ತು ಸೃಜನಶೀಲತೆಯನ್ನು ನಕಲು ಮಾಡಲು ಸಾಧ್ಯವಿಲ್ಲ, ಇವು ಕೇವಲ ಸುಸಂಸ್ಕೃತ ಮಾನವನ ಮನಸ್ಸಿನಿಂದ ಮಾತ್ರ ಬರಲು ಸಾಧ್ಯ ಎಂದು ಐಐಐಟಿ ಬೆಂಗಳೂರಿನ ಪ್ರೊ.ದೇಬವ್ರತದಾಸ್ ಅಭಿಪ್ರಾಯಪಟ್ಟರು.
ಅವರು 19ನೇ ತುಮಕೂರು ವಿವಿಘಟಿಕೋತ್ಸವ ಭಾಷಣ ಮಾಡಿ ಮಾತನಾಡುತ್ತಿದ್ದರು. ಎಐ ತಂತ್ರಜ್ಞಾನವನ್ನು ಭಸ್ಮಾಸುರನಿಗೆ ಹೋಲಿಸಿ ಮಾತನಾಡಿದ ಅವರು ಎಐ ಮಾನವನಲ್ಲಿ ಅತ್ಯುತ್ತಮವಾದ ಭಸ್ಮಾಸುರರವನ್ನು ನೀಡುತ್ತಿದೆ ಎಂದರು. ಈ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ನೈತಿಕ ಹೃದಯದ ಅಗತ್ಯವಿದೆ. ನೈತಿಕ ಹೃದಯವಿಲ್ಲದಲ್ಲಿ ನಾವು ನಮ್ಮ ಸಮಾಜದ ವ್ಯವಸ್ಥೆಯನ್ನು, ನಮ್ಮ ಖಾಸಗಿತನವನ್ನು, ಮಾನಸಿಕ ಸ್ವಾಸ್ಥ್ಯವನ್ನು ನಾಶಪಡಿಸಿಕೊಳ್ಳುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕೇವಲ ಬುದ್ದಿವಂತಿಕೆಯು ಆಲ್ಗಾರಿದಮ್ ಅನ್ನು ಹೇಗೆ ನಿರ್ಮಿಸಬೇಕೆಂದು ಹೇಳಿಕೊಡುತ್ತದೆ. ಆದರೆ ಮೌಲ್ಯಗಳು ಅದನ್ನು ಬಳಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುತ್ತವೆ. ಬುದ್ಧಿವಂತಿಕೆ ಲಾಭವನ್ನು ಹೆಚ್ಚಿಸಬೇಕು ಎಂಬುದನ್ನು ತಿಳಿಸುತ್ತದೆ, ಆದರೆ ಮೌಲ್ಯಗಳು ಸಮುದಾಯ. ವನ್ನು ಹೇಗೆ ಸುಸ್ಥಿರವಾಗಿಡಬೇಕು ಎಂಬುದನ್ನು ಕಲಿಸುತ್ತವೆ ಎಂದರು.
ವಿದ್ಯಾರ್ಥಿಗಳು ತಮ್ಮ ಜ್ಞಾನ ದ ಗುಣಮಟ್ಟದ, ಕೌಶಲ್ಯ, ನೈತಿಕತೆ ಮತ್ತು ಶ್ರಮದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.ಜಾಗತಿಕ ವಾಗಿ ತಾವು ಐಐಐಟಿ ಬೆಂಗಳೂರಿನ ಮೂಲಕ ಜಗತ್ತು ಗಮನಿಸುವಂತಹ ಅದ್ಬುತವಾದ ಕಾರ್ಯ ಮಾಡಿರುವುದಾಗಿ ತಿಳಿಸಿದರು.
60ದೇಶಗಳಿಗೆ ಡಿಜಿಟಲ್ ಪಬ್ಲಿಕ್ ಇನ್ಫಾಸ್ಟಕ್ಚರ್ ಕುರಿತು ಸಲಹೆ ಮತ್ತು ಸ್ಥಾಪನಾ ಬೆಂಬಲ ನೀಡಿರುವುದರಿಂದ ಮತ್ತು 29 ದೇಶಗಳಲ್ಲಿ ನಮ್ಮ ಉತ್ಪನ್ನಗಳಲ್ಲಿ ಒಂದಾದ ಮಾಡ್ಯೂಲರ್ ಓಪನ್ ಸೋರ್ಸ್ ಐಡೆಂಟಿಟಿ ಪ್ಲಾಟ್ ಫಾರ್ಮ್ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಾವೂ ಬೆಳೆಯುವ ಜೊತೆಗೆ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿನ ಕೃಷಿ. ಸಣ್ಣ ಕೈಗಾರಿಕೆ, ಗ್ರಾಮೀಣ ಆರೋಗ್ಯ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.


