Menu

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಮಾತೃ ಸ್ವರೂಪಿಣಿ: ಸಿಎಂ ಡಿಕೆ ಶಿವಕುಮಾರ್‌ ಸಂತಾಪ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನ್ನವರ ಪಾರ್ಥಿವ ಶರೀರಕ್ಕೆ ಪದ್ಮನಾಭನಗರ ನಿವಾಸದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ  ಜತೆ ಶನಿವಾರ ರಾತ್ರಿ ಅಂತಿಮ ನಮನ ಸಲ್ಲಿಸಿದರು. ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಜಿ ಸಿಎಂ ದಿವಂಗತ ಎಸ್ ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿ ಮಾಳವಿಕಾ ಉಪಸ್ಥಿತರಿದ್ದರು.

ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದವರು ಶ್ರೀಮತಿ ಚನ್ನಮ್ಮ ಅವರು ಎಲ್ಲರಿಗೂ ಮಾದರಿಯಾಗಿದ್ದರು ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನವರ ಪಾರ್ಥಿವ ಶರೀರಕ್ಕೆ ಶಿವಕುಮಾರ್ ಅವರು ಅಂತಿಮ ನಮನ ಸಲ್ಲಿಸಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮಾತೃ ಸ್ವರೂಪರಾದ ಚನ್ನಮ್ಮ ಅವರ ನಿಧನ ಮನಸ್ಸಿಗೆ ನೋವಾಗಿದೆ. ಅವರ ಆರೋಗ್ಯ ಗಂಭೀರವಾಗಿತ್ತು ಎಂಬ ಮಾಹಿತಿ ನಮಗೆ ಬಂದಿತ್ತು. ಅವರು ಅಪಾರ ದೈವ ಭಕ್ತೆಯಾಗಿದ್ದರು. ದೇಶದ ದೊಡ್ಡ ಕುಟುಂಬಕ್ಕೆ ಕಷ್ಟ ಹಾಗೂ ಸುಖದ ದಿನಗಳಲ್ಲಿ ಹಗಲು ರಾತ್ರಿ ಜೊತೆಯಾಗಿ ನಿಂತು ಸೇವೆ ಮಾಡಿದ ಧೀಮಂತ ಮಹಿಳೆ ಎಂದು ಸ್ಮರಿಸಿದರು.

ದೇಶ ಹಾಗೂ ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದರು. ದೇವೇಗೌಡರು ಹಾಗೂ ಆ ಕುಟುಂಬದ ಎಲ್ಲಾ ಮಕ್ಕಳ ಯಶಸ್ಸಿಗೆ ಅನೇಕ ತ್ಯಾಗ ಮಾಡಿದ ಹೆಣ್ಣುಮಗಳು. ಆಕೆಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಅಂತಿಮ ನಮನಗಳನ್ನು ಸಲ್ಲಿಸಲಾಗುವುದು. ಸೋಮವಾರ ಅವರ ಅಂತ್ಯಕ್ರಿಯೆಯನ್ನು ಮಾಡಲು ಕುಟುಂಬದವರು ತೀರ್ಮಾನ ಮಾಡಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸರ್ಕಾರದ ಕಡೆಯಿಂದ ಸೂಚನೆ ನೀಡಲಾಗಿದೆ ಎಂದರು.

ಮಾಜಿ ಪ್ರಧಾನಮಂತ್ರಿಗಳ ಪತ್ನಿ, ಕೇಂದ್ರ ಸಚಿವರ ತಾಯಿಯಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರಿ ಗೌರವ ನೀಡಲು ತೀರ್ಮಾನಿಸಿದ್ದೇವೆ. ದೇವೇಗೌಡರ ರಾಜಕೀಯ ಹಾದಿಯ ಎಲ್ಲಾ ಹಂತಗಳಲ್ಲಿ ಅವರ ಜೊತೆಗೆ ನಿಂತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚನ್ನಮ್ಮ (೮೫) ಬೆಂಗಳೂರಿನಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಒಂದು ವರ್ಷದಿಂದ ಮನೆಯಲ್ಲೇ ಸಜ್ಜುಗೊಳಿಸಿದ್ದ ಐಸಿಯುನಲ್ಲಿ ಚಿಕಿತೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ಜುಲೈ ೧೫ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾದರು.
ವೈದ್ಯ ಸತ್ಯನಾರಾಯಣ ಅವರು ಚನ್ನಮ್ಮ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.

ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ 1954 ಮೇ 25ರಂದು ಹೆಚ್​​.ಡಿ. ದೇವೇಗೌಡರನ್ನು ಮದುವೆಯಾಗಿದ್ದರು. ಹೆಚ್​​.ಡಿ. ರೇವಣ್ಣ, ಹೆಚ್​​.ಡಿ. ಬಾಲಕೃಷ್ಣ, ಹೆಚ್​​.ಡಿ. ರಮೇಶ್​​ ಗೌಡ, ಹೆಚ್​​.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

2001ರ ಫೆಬ್ರವರಿ ತಿಂಗಳಲ್ಲಿ ಚನ್ನಮ್ಮ ಅವರು ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ಅವರ ಮೇಲೆ ಆ್ಯಸಿಡ್ ದಾಳಿಯಾಗಿ ಗಂಭೀರ ಗಾಯಗೊಂಡಿದ್ದರು. ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಮಗಳಾಗಿದ್ದ ಚನ್ನಮ್ಮ ಆಗ ಎಸ್ಸೆಸ್ಸೆಲ್ಸಿ ಓದಿದ್ದರು. ಅವರಿಗೆ ನಾಲ್ವರು ತಮ್ಮಂದಿರು ಮತ್ತು ಮೂವರು ತಂಗಿಯರು.

Related Posts

Leave a Reply

Your email address will not be published. Required fields are marked *