Menu

ಕೆಪಿಎಸ್‌ಸಿ ಅಧೋಗತಿ: ಪರಿಹಾರವೆಲ್ಲಿ?

KPSC

ಕೆಪಿಎಸ್‌ಸಿ ಆರೋಪಿತ ಅಧಿಕಾರಿಗಳ ಅಮಾನತು ಹಾಗೂ ತನಿಖೆ – ಇಂತಹ ಕ್ರಮಗಳು ಮೇಲ್ನೋಟಕ್ಕೆ ಹಾಗೂ ಈ ಕ್ಷಣಕ್ಕೆ ಸರಿಯೆನಿಸಿದರೂ , ಇದು ದೀರ್ಘಕಾಲಿಕ ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ಮಾರ್ಗವಂತೂ ಅಲ್ಲ. ಬೇಸತ್ತ ನಾಡಿನ ಯುವಕ ಯುವತಿಯರಿಗೆ ಈಗ ಬೇಕಿರುವುದು ಭರವಸೆ ಮೂಡಿಸಬಲ್ಲ ಭ್ರಷ್ಟರಹಿತ ನೇಮಕಾತಿ ವ್ಯವಸ್ಥೆಯಷ್ಟೆ.

ರಾಜ್ಯ ಲೋಕಸೇವಾ ಆಯೋಗದ ಪ್ರತಿಯೊಂದು ಹೆಜ್ಜೆಯೂ ಶಂಕಾಸ್ಪದ. ಸರ್ಕಾರಿ ನೌಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸ್ವತಂತ್ರ ಆಯೋಗದ ಪರಿಸ್ಥಿತಿ ಇದು. ಇನ್ನು ಈ ಆಯೋಗ ನಿರ್ವಹಿಸುವ ಪರೀಕ್ಷೆಗಳ ಮೇಲೆ ಓರ್ವ ಸಾಮಾನ್ಯ ಪದವೀಧರ ಯುವಕ ನಂಬಿಕೆಯಿಟ್ಟು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿ ನೌಕರಿ ಗಿಟ್ಟಿಸುವುದಾದರೂ ಹೇಗೆ, ಇಂತಹ ಅಯೋಗ್ಯ ಆಯೋಗವಿಂದು ಹಲವು ಹತ್ತು ವಿವಾದಗಳ ಹುತ್ತದಲ್ಲಿ ಸಿಲುಕಿರುವುದು ನಾಡಿನ ಯುವ ಸಮುದಾಯಕ್ಕೊಂದು ಶಾಪ.

ಆಯೋಗವು ಸ್ಥಾಪನೆಯಾದ ಲಾಗಾಯ್ತಿನಿಂದಲೂ ಇದೇ ತೆರನಾದ ವಿದ್ಯಮಾನಗಳು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಲಂಚಗುಳಿತನದಿಂದ ಮುಕ್ತವಾದ ನೇಮಕಾತಿಯ ಇತಿಹಾಸವನ್ನು ದುರ್ಬೀನು ಹಿಡಿದು ಪತ್ತೆ ಮಾಡುವಂತಾಗಿದೆ. ಅಸಲಿಗೆ ಈ ಆಯೋಗದ ನೆಪದಲ್ಲಿ ಮತ್ತು ಇದರ ಹಿಂದಿರುವ ಹಲವು ಕರಾಳ ಮುಖಗಳನ್ನು ಬಯಲಿಗೆಳೆಯಲು ಸರ್ಕಾರಗಳಿಗೇ ಆಸಕ್ತಿ ಇಲ್ಲದಂತಾಗಿದೆ. ಎಲ್ಲವನ್ನೂ ರಾಜಕೀಯ ತಳಹದಿಯ ಹಿನ್ನೆಲೆಯಲ್ಲಿ ಮುಂದುವರಿದಿರುವ ಆಯೋಗದ ಇಡೀ ವ್ಯವಹಾರ ಇಂದು ವ್ಯಾಪಾರ- ವಹಿವಾಟು ಆಗಿ ಪರಿಣಮಿಸಿರುವುದು ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಕರ ಪಾಲಿಗೆ ಒಂದು ದುಸ್ವಪ್ನ.

ಆಯೋಗದ ಅಧ್ಯಕ್ಷರೇ ಇಂದು ಆರೋಪಿತ ಸ್ಥಾನದಲ್ಲಿರುವುದು ಗಂಭೀರ. ಇವರ ಅಮಾನತು ಮತ್ತು ಇವರ ಮೇಲಿನ ತನಿಖೆಗೆ ಉಂಟಾದ ಕಾನೂನಿನ ಅಂಶಗಳು ಹಾಗಿರಲಿ. ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ? ಈ ನಡುವೆ ಆಯೋಗದಲ್ಲಿ ಕೆಲಸ ಮಾಡಿದ ಓರ್ವ ಐ ಎ ಎಸ್ ಅಧಿಕಾರಿಯ ಅನುಮಾನಾಸ್ಪದ ನಡೆಯಿಂದ ಸಾರ್ವತ್ರಿಕವಾಗಿ ಮತ್ತಷ್ಡು ಅಪನಂಬಿಕೆ ಮತ್ತು ಅವಿಶ್ವಾಸ ತಲೆಯೆತ್ತಿರುವುದು ನಿಜ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಧಿಕಾರಿ ನಿವಾಸ ಮತ್ತು ಕೆಲವೊಂದು ಆಯಕಟ್ಟಿನ ಜಾಗಗಳಲ್ಲಿ ದಾಳಿ ನಡೆಸಿ ಹಲವು ದಾಖಲೆಗಳನ್ನು ಕಲೆ ಹಾಕಿರುವುದು ಸರಿಯಷ್ಟೆ. ಆದರೆ ಕೇವಲ ಈ ದಾಳಿಯಿಂದಲೇ ಕೆಪಿಎಸ್‌ಸಿಯಲ್ಲಿ ತುಂಬಿ ತುಳುಕಿರುವ ಅಕ್ರಮಗಳು ತೊಳೆದು ಹೋಗದು. ಇದರ ಮೇಜರ್ ಸರ್ಜರಿ ಆಗಬೇಕಾದರೆ ಸರ್ಕಾರದ ದಿಟ್ಟ ಮತ್ತು ನಿಷ್ಟುರ ನಿರ್ಧಾರದಿಂದ ಮಾತ್ರ ಸಾಧ್ಯ . ಆದರೆ ಇದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಬಾರದಲ್ಲವೇ?

ಜನಪರವಾದ ನಿಲುವು ಮತ್ತು ನಿರ್ಧಾರಗಳ ಬಗ್ಗೆ ಸಾರ್ವಜನಿಕವಾಗಿ ಪುಂಖಾನುಪುಂಖವಾಗಿ ಭಾಷಣ ಮಾಡುವಂತಹ ಜನಪ್ರತಿನಿಧಿಗಳು ಈ ವಿಚಾರದಲ್ಲಿ ತಮ್ಮ ರಾಜಕೀಯ ಸಿದ್ಧಾಂತಗಳನ್ನು ಬದಿಗಿತ್ತು ಕೆಪಿಎಸ್‌ಸಿಯಲ್ಲಿ ತುಂಬಿರುವ ಕೊಳಕು ಮತ್ತು ಗಲೀಜನ್ನು ಸಂಪೂರ್ಣವಾಗಿ ಹೊರ ತೆಗೆದು ಸ್ವಚ್ಚಗೊಳಿಸಲು ಸಂಕಲ್ಪ ತೊಡಬೇಕಿದೆ. ಆರೋಪಿತ ಅಧಿಕಾರಿಗಳ ಅಮಾನತು ಮತ್ತು ತನಿಖೆ , ಇಂತಹ ಕ್ರಮಗಳು ಮೆಲ್ನೋಟಕ್ಕೆ ಮತ್ತು ತತಕ್ಷಣಕ್ಕೆ ಸರಿಯಾದರೂ ಇದು ದೀರ್ಘಕಾಲಿಕ ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ಮಾರ್ಗವಂತೂ ಅಲ್ಲ. ಬೇಸತ್ತು ಹೋದ ನಾಡಿನ ಯುವಕ ಯುವತಿಯರಿಗೆ ಈಗ ಬೇಕಿರುವುದು ಭರವಸೆ ಮೂಡಿಸಬಲ್ಲ ಭ್ರಷ್ಟರಹಿತ ನೇಮಕಾತಿ ವ್ಯವಸ್ಥೆಯಷ್ಟೆ.

Related Posts

Leave a Reply

Your email address will not be published. Required fields are marked *