ರಾಜ್ಯ ಸರ್ಕಾರ ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನವನ್ನು ರದ್ದು ಮಾಡಿದೆ. ಆದ್ದರಿಂದ ಈಗ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನವನ್ನು ರದ್ದು ಮಾಡಿದೆ. ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಮಾಡುತ್ತೇವೆಂದು ಘೋಷಿಸಿದ ಬಳಿಕ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇವೆಂದು ಹೇಳಿದ ನಂತರ ಸರ್ಕಾರ ಈ ತೀರ್ಮಾನ ಮಾಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಅಧಿವೇಶನವನ್ನು ಪೂರ್ತಿಯಾಗಿ ನಡೆಸಬೇಕಿತ್ತು. ಹೊಸ ಸಭಾಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿತ್ತು. ಆದರೆ ಸಭಾಧ್ಯಕ್ಷರು ಸದನ ನಡೆಸದೆ ರದ್ದು ಮಾಡಿದ್ದಾರೆ. ಆದ್ದರಿಂದ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ ಎಂದರು.
ದಲಿತರ ಹಣ ನ್ಯಾಯಯುತವಾಗಿ ವಾಪಸ್ ಬರಬೇಕೆಂಬುದೇ ನಮ್ಮ ಬೇಡಿಕೆ. ಕೋಟ್ಯಂತರ ದಲಿತರು ರಾಜ್ಯದಲ್ಲಿದ್ದು, ಸರ್ಕಾರದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿ ಕಬಳಿಕೆ, ಬರಗಾಲ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಕಾಂಗ್ರೆಸ್‌ನ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಸ್ಥಳೀಯ ಸಂಸ್ಥೆಗಳಿಂದ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಇದು ರಾಜ್ಯದ ಬೊಕ್ಕಸದ ಲೂಟಿ ಮಾಡುವ ಕಾರ್ಯಕ್ರಮ. ಇವೆಲ್ಲ ವಿಷಯಗಳ ವಿರುದ್ಧ ಪಾದಯಾತ್ರೆ ಮಾಡಲು ತೀರ್ಮಾನಿಸಲಿದ್ದೇವೆ. ಪಾದಯಾತ್ರೆಯನ್ನು ರದ್ದು ಮಾಡುವುದಿಲ್ಲ ಎಂದರು.
ನಾಗೇಂದ್ರ ಸಂಪುಟ ಸೇರ್ಪಡೆಗೆ ಆಕ್ಷೇಪ: ರಾಜ್ಯಪಾಲರಿಗೆ ಪತ್ರ
ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಮರುಸೇರ್ಪಡೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆರ್ ಅಶೋಕ, ಈ ಕುರಿತು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗೆ ನಾಗೇಂದ್ರ ಅವರ ಸಂಪುಟ ಸೇರ್ಪಡೆ ಹಿಂಪಡೆಯುವಂತೆ ಸೂಚಿಸಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯಪಾಲರಿಗೆ ವಿವರವಾದ ಪತ್ರ ಬರೆದಿರುವ ಅಶೋಕ, ಇದು ಕೇವಲ ಕಾನೂನುಬದ್ಧ ಅರ್ಹತೆಯ ಪ್ರಶ್ನೆಯಲ್ಲ; ಸಂವಿಧಾನಾತ್ಮಕ ಔಚಿತ್ಯ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಜನರ ವಿಶ್ವಾಸದ ಪ್ರಶ್ನೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಸುಮಾರು ₹89.63 ಕೋಟಿ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ನಡೆದಿರುವ ಬಗ್ಗೆ ತನಿಖಾ ಸಂಸ್ಥೆ ಆರೋಪಗಳನ್ನು ದಾಖಲಿಸಿದೆ. ಈ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರನ್ನು ಆರೋಪಿಯಾಗಿ ಹೆಸರಿಸಲಾಗಿದ್ದು, ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸೇರಿದಂತೆ ಇತರ ಸಂಸ್ಥೆಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳೂ ಮುಂದುವರಿದಿವೆ ಎಂದು ತಿಳಿಸಿದ್ದಾರೆ.
ಆರೋಪಗಳು ಕೊನೆಗೊಂಡಿಲ್ಲ. ಪ್ರಕರಣ ಮುಚ್ಚಲ್ಪಟ್ಟಿಲ್ಲ. ಖುಲಾಸೆ ಆಗಿಲ್ಲ. ಬದಲಾಗಿ ತನಿಖೆ ಮುಂದುವರಿದು ಚಾರ್ಜ್‌ಶೀಟ್ ಸಲ್ಲಿಕೆಯ ಹಂತಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಅದೇ ವ್ಯಕ್ತಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದಕ್ಕೆ ಸರ್ಕಾರದ ಬಳಿ ಯಾವ ನೈತಿಕ ಸಮರ್ಥನೆ ಇದೆ ಎಂದು ಪ್ರಶ್ನಿಸಿದ್ದಾರೆ.
ಕಾನೂನುಬದ್ಧ ಅರ್ಹತೆ ಬೇರೆ, ಸಂವಿಧಾನಾತ್ಮಕ ಔಚಿತ್ಯ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ನೈತಿಕ ಜವಾಬ್ದಾರಿ ಬೇರೆ. ಅಪರಾಧ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವುದು ನ್ಯಾಯಾಲಯದ ಕೆಲಸ. ಆದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದು ಮುಖ್ಯಮಂತ್ರಿಯ ಸಂವಿಧಾನಾತ್ಮಕ ಮತ್ತು ನೈತಿಕ ಜವಾಬ್ದಾರಿಯ ಪ್ರಶ್ನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನದ ವಿಧಿ 164ರ ಅಡಿಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಸಚಿವರನ್ನು ನೇಮಕ ಮಾಡುವ ವ್ಯವಸ್ಥೆಯನ್ನು ತಾವು ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿರುವ ಅಶೋಕ, ತಮ್ಮ ಮನವಿ ಯಾವುದೇ ರೀತಿಯಲ್ಲಿ ಚುನಾಯಿತ ಸರ್ಕಾರದ ಸಂವಿಧಾನಾತ್ಮಕ ವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ.
ಬಿ. ನಾಗೇಂದ್ರ ವಿರುದ್ಧದ ಸಿಬಿಐ, ಲೋಕಾಯುಕ್ತ ಹಾಗೂ ಇತರ ಪ್ರಕರಣಗಳ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಿಂದ ಸಮಗ್ರ ವರದಿ ಪಡೆಯಬೇಕು, ಗಂಭೀರ ಭ್ರಷ್ಟಾಚಾರ ಸಂಬಂಧಿತ ಕ್ರಿಮಿನಲ್ ಪ್ರಕ್ರಿಯೆಗಳು ಮುಂದುವರಿದಿರುವ ಸಂದರ್ಭದಲ್ಲಿ ಬಿ. ನಾಗೇಂದ್ರ ಅವರು ಸಚಿವರಾಗಿ ಮುಂದುವರಿಯದಂತೆ ಸಂವಿಧಾನಾತ್ಮಕವಾಗಿ ಲಭ್ಯವಿರುವ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ರೀತಿಯಲ್ಲಿ ಬಿ. ನಾಗೇಂದ್ರ ಅವರನ್ನು ಅಪರಾಧಿ ಎಂದು ಪೂರ್ವನಿರ್ಣಯ ಮಾಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ನಾಗೇಂದ್ರ ಅವರ ಸಚಿವ ಸಂಪುಟ ಸೇರ್ಪಡೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ರಾಜ್ಯಪಾಲರು ಈ ವಿಚಾರದಲ್ಲಿ ತಮ್ಮ ಸಂವಿಧಾನಾತ್ಮಕ ವ್ಯಾಪ್ತಿಯೊಳಗೆಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


