Menu

ಬೆಂಗಳೂರಿಗರ ಪಾಲಿಗೆ ಮರೀಚಿಕೆಯಾದ ಎ ಖಾತೆ: ಆರ್‌ ಅಶೋಕ

R Ashoka

ಬೆಂಗಳೂರಿನ  8.25 ಲಕ್ಷ ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ ಕಾಂಗ್ರೆಸ್ ಸರ್ಕಾರದ ಯೋಜನೆ ಇಂದು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಯೋಜನೆ ಘೋಷಣೆಯಾಗಿ ಆರು ತಿಂಗಳು ಕಳೆದರೂ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಕೇವಲ ಶೇ.10ಕ್ಕಿಂತ ಕಡಿಮೆ ಅರ್ಜಿಗಳು ವಿಲೇವಾರಿಯಾಗಿರುವುದು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್‌  ಅಶೋಕ ಟೀಕಿಸಿದ್ದಾರೆ.

ಪಾಲಿಕೆಯ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ಸುಮಾರು 8.25 ಲಕ್ಷ ಬಿ-ಖಾತಾ ಆಸ್ತಿಗಿದ್ದರೂ, ಕೇವಲ 8,308 ಅರ್ಜಿಗಳು ಮಾತ್ರ ಸ್ವೀಕೃತವಾಗಿರುವುದು ಸರ್ಕಾರದ ವಿಶ್ವಾಸಾರ್ಹತೆ ಎಷ್ಟು ಪಾತಾಳಕ್ಕೆ ಕುಸಿದಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ. ವ್ಯಾಪಕವಾಗಿ ಹರಡಿರುವ ಲಂಚಗುಳಿತದ ಭೀತಿಯಿಂದಾಗಿ ಸಾರ್ವಜನಿಕರು ಈ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ. ಸಲ್ಲಿಕೆಯಾಗಿರುವ ಅಲ್ಪ ಪ್ರಮಾಣದ ಅರ್ಜಿಗಳಲ್ಲಿ ಕೇವಲ 818 ಅರ್ಜಿಗಳಿಗೆ ಮಾತ್ರ ಇ-ಖಾತಾ ಮಂಜೂರು ಮಾಡಲಾಗಿದೆ. ಉಳಿದ 7,490 ಅರ್ಜಿಗಳು ಧೂಳು ಹಿಡಿಯುತ್ತಿದ್ದು, ಸಾರ್ವಜನಿಕರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಅಂಕಿ ಅಂಶಗಳೇ ಹೇಳುವಂತೆ, ಈ ಯೋಜನೆ ಬೆಂಗಳೂರಿಗರ ಸಮಸ್ಯೆಗಳನ್ನು ಪರಿಹರಿಸುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ “ಲೂಟಿ ವ್ಯವಸ್ಥೆ”ಯಾಗಿ ಬದಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. “ಸೇವೆ”ಯ ಹೆಸರಿನಲ್ಲಿ ನಡೆಯುತ್ತಿರುವ ಈ ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಗಾಢವಾಗಿ ಬೇರೂರಿದೆ ಎಂದು ಬರೆದುಕೊಂಡಿದ್ದಾರೆ.

ಖುದ್ದು ಉಪಮುಖ್ಯಮಂತ್ರಿ @DKShivakumar ಅವರ ನೇತೃತ್ವದ ಈ ಅಭಿಯಾನದ ವೈಫಲ್ಯಕ್ಕೆ ಕಾಂಗ್ರೆಸ್ ಸರ್ಕಾರದ ಒಳಜಗಳವೇ ಮುಖ್ಯ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರದ ಹಪಾಹಪಿ ಹಾಗೂ ಕುರ್ಚಿ ಕಿತ್ತಾಟದಲ್ಲಿ ಸಾಮಾನ್ಯ ಜನರ ಮೂಲಭೂತ ಸಮಸ್ಯೆಗಳು ಮೂಲೆಗುಂಪಾಗಿವೆ. ಕೇವಲ ಬಣ್ಣಬಣ್ಣದ ಜಾಹೀರಾತುಗಳು ಮತ್ತು ಸುಳ್ಳು ಭರವಸೆಗಳ ಮೂಲಕ ಭ್ರಮೆ ಸೃಷ್ಟಿಸುತ್ತಿರುವ ಸರ್ಕಾರ, ಜನರಿಗೆ ಸಿಗಬೇಕಾದ ಕನಿಷ್ಠ ಸೇವೆಗಳನ್ನು ನೀಡುವಲ್ಲಿಯೂ ವಿಫಲವಾಗಿದೆ. ಈ ಆಡಳಿತಾತ್ಮಕ ಅಸಮರ್ಥತೆ ಮತ್ತು ಲಂಚಗುಳಿತಕ್ಕೆ ಬೆಂಗಳೂರಿನ ನಾಗರಿಕರು ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು  ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *