ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ದರ್ಗಾದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಖಾಲಿ ಜಾಗದಲ್ಲಿ ನೂತನ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನ ಕಾಮಗಾರಿ ನಡೆಸಬಾರದು ಎಂದು ಸ್ಥಳೀಯರು ಹೇಳಿದ್ದರು. ಆದರೂ ಕಾಮಗಾರಿ ನಡೆಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಇದೇ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಅಂದಿನ ನಗರಸಭೆ ಅಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಅಕ್ರಮವಾಗಿ ದರ್ಗಾ ಸಮೀಪದಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ನೂತನವಾಗಿ ನಡೆಸುತ್ತಿರುವ ಕಾಮಗಾರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಬೇಕು ಅಲ್ಲಿಯವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಸ್ಥಳೀಯರು ಪಟ್ಟುಹಿಡಿದ್ದಾರೆ.
ಪ್ರತಿಭಟನಾನಿರತರ ಮನವೊಲಿಸಲು ನಗರಸಭೆ ಅಧ್ಯಕ್ಷೆ ಮುಂದಾದರೂ ಪ್ರಯೋಜನವಾಗಲಿಲ್ಲ. ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದಾರೆ.