ಉದಯಕಾಲ ನ್ಯೂಸ್, ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ರೈತರ ಬದುಕನ್ನೇ ಕಸಿದುಕೊಳ್ಳುತ್ತಿದೆ. ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಭಾರಿ ಪ್ರಮಾಣದ ಬೆಳೆಯನ್ನು ತುಳಿದು ನಾಶಪಡಿಸಿದೆ. ಈ ದುರ್ಘಟನೆಯಿಂದ ಕಂಗೆಟ್ಟಿರುವ ಅನ್ನದಾತರು ಹಾಗೂ ಗ್ರಾಮಸ್ಥರು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದು, ಇಂದಿನಿಂದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಲು ನಿರ್ಧರಿಸಿದ್ದಾರೆ.
20 ವರ್ಷಗಳ ಪರಿಶ್ರಮ ಕ್ಷಣಾರ್ಧದಲ್ಲಿ ಮಣ್ಣುಪಾಲು; ಸುಪ್ರೀತ್‌ಗೆ ಭಾರಿ ನಷ್ಟ
ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದ ಸುಪ್ರೀತ್ ಗೌಡ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ನುಗ್ಗಿದ ಸುಮಾರು 20 ಕಾಡಾನೆಗಳ ಹಿಂಡು, ಒಂದು ಎಕರೆ ಪ್ರದೇಶದಲ್ಲಿದ್ದ ಕಾಫಿ ಗಿಡಗಳನ್ನು ಸಂಪೂರ್ಣವಾಗಿ ತುಳಿದು ನೆಲಸಮ ಮಾಡಿವೆ. ಕಳೆದ 20 ವರ್ಷಗಳಿಂದ ಅತ್ಯಂತ ಶ್ರಮವಹಿಸಿ ಬೆಳೆಸಿದ್ದ ಕಾಫಿ ತೋಟವು ಕಾಡಾನೆಗಳ ದಾಳಿಯಿಂದ ಧ್ವಂಸಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಕಾಫಿ ಕಟಾವಿಗೆ ಬರಬೇಕಿದ್ದ ತೋಟದಿಂದ ಸುಮಾರು 6 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದ ರೈತ ಸುಪ್ರೀತ್, ಬೆಳೆ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ವರ್ಷಗಳ ಕಷ್ಟ, ಬೆವರು ಮತ್ತು ಬಂಡವಾಳ ಒಂದೇ ರಾತ್ರಿಯಲ್ಲಿ ನಾಶವಾಗಿದ್ದು, ರೈತನಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ.
ಮಕ್ಕಳಂತೆ ಸಾಕಿದ್ದ ತೋಟ ನಾಶವಾಗಿದೆ: ರೈತ ಸುಪ್ರೀತ್ ಗೌಡ ಅಳಲು
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಸುಪ್ರೀತ್ ಗೌಡ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ನಾನು ಕಾಫಿ ತೋಟವನ್ನು ಮಕ್ಕಳಂತೆ ಜೋಪಾನವಾಗಿ ಬೆಳೆಸಿಕೊಂಡು ಬಂದಿದ್ದೆ. ಆದರೆ 20ಕ್ಕೂ ಹೆಚ್ಚು ಕಾಡಾನೆಗಳು ತೋಟಕ್ಕೆ ನುಗ್ಗಿ ಸಂಪೂರ್ಣ ಬೆಳೆಯನ್ನು ನಾಶಪಡಿಸಿವೆ. ಇದರಿಂದ ನಮ್ಮ ಕುಟುಂಬದ ಜೀವನದ ಆದಾಯದ ಪ್ರಮುಖ ಮೂಲವನ್ನೇ ಕಿತ್ತುಕೊಂಡಂತಾಗಿದೆ. ಅರಣ್ಯ ಇಲಾಖೆ ಈ ಕೂಡಲೇ ಗಮನ ಹರಿಸಿ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಶಾಶ್ವತ ಪರಿಹಾರ ಹುಡುಕುವುದರ ಜೊತೆಗೆ ನಮಗೆ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕುಮ್ಕಿ ಆನೆಗಳ ವಾಪಸ್; ಸ್ಥಳಾಂತರ ಕಾರ್ಯಾಚರಣೆಯ ಚರ್ಚೆ
ಮತ್ತೊಂದೆಡೆ, ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪದೊಂದಿಗೆ ರೈತರ ಆಕ್ರೋಶ ಹೆಚ್ಚಾಗಿದೆ. ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ವಿಚಾರವೂ ಈ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕುಮ್ಕಿ ಆನೆಗಳು ನಿನ್ನೆ ಸಂಜೆ ಮತ್ತೆ ಬೇಲೂರು ಕಡೆಗೆ ಮುಖ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆನೆಗಳ ಹಿಂಡು ಕಾರ್ಬೈಲು, ಮಾಕೋನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸುತ್ತಿರುವುದರಿಂದ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ.
ಮಾಕೋನಹಳ್ಳಿ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ
ಈ ಎಲ್ಲಾ ಬೆಳವಣಿಗೆಗಳ ನಡುವೆ ರೈತರು ಈಗ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದಿನಿಂದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಮಾಕೋನಹಳ್ಳಿ ಹಾಗೂ ನಂದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸೇರಿದಂತೆ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು, ಹಾನಿಗೊಳಗಾದ ಬೆಳೆಗೆ ಸಮರ್ಪಕ ಪರಿಹಾರ ನೀಡಬೇಕು ಹಾಗೂ ರೈತರ ಜೀವ ಮತ್ತು ಆಸ್ತಿಪಾಸ್ತಿಗೆ ಸಂಪೂರ್ಣ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿ ನಿರಂತರ ಹೋರಾಟ ನಡೆಸಲು ರೈತರು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ರೈತರ ಬದುಕನ್ನೇ ಸಂಕಷ್ಟಕ್ಕೆ ದೂಡುತ್ತಿದ್ದು, ಇಂದಿನಿಂದ ಆರಂಭವಾಗಲಿರುವ ಅಹೋರಾತ್ರಿ ಧರಣಿ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಯಾವ ರೀತಿಯ ಬಿಸಿ ಮುಟ್ಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
#Chikkamagaluru #Mudigere #WildElephantAttack #CoffeeEstate #Karbailu #Makonahalli #FarmersProtest #ForestDepartment #KarnatakaNews #UdayakalaNews

