ಉದಯಕಾಲ ನ್ಯೂಸ್, ಕೋಲ್ಕತ್ತಾ: ದೇಶದ ಅತ್ಯಂತ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೆರಿ ಇಂಟರ್‌ನ್ಯಾಷನಲ್ ಕಂಪನಿಗೆ ಮತ್ತೊಂದು ದೊಡ್ಡ ಕಾನೂನು ಸಂಕಷ್ಟ ಎದುರಾಗಿದೆ. ಗೋವಾ ಘಟಕದ ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾದ ಬೆನ್ನಲ್ಲೇ, ಇದೀಗ ಪಶ್ಚಿಮ ಬಂಗಾಳದಲ್ಲೂ ಬಿಸ್ಲೆರಿ ಕುಡಿಯುವ ನೀರಿನ ಮಾದರಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ‘ಅಸುರಕ್ಷಿತ’ ಎಂದು ಘೋಷಿಸಿದೆ. ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಧಿಕಾರ ಅಧಿಕೃತ ಅನುಮತಿ ನೀಡಿದೆ.
ಜಲಪೈಗುರಿ ಘಟಕದ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆ
ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾಗಿದ್ದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ (ಬ್ಯಾಚ್ ಸಂಖ್ಯೆ PB 201) ಪ್ರಯೋಗಾಲಯದ ಪರೀಕ್ಷೆಯಲ್ಲಿ ವಿಫಲವಾಗಿದೆ. ಪ್ರಾಥಮಿಕ ಪ್ರಯೋಗಾಲಯ ಮತ್ತು ರೆಫರಲ್ ಆಹಾರ ಪ್ರಯೋಗಾಲಯಗಳೆರಡೂ ಈ ನೀರಿನ ಮಾದರಿಯಲ್ಲಿ ಅಪಾಯಕಾರಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದನ್ನು ದೃಢಪಡಿಸಿವೆ.
ತಜ್ಞರ ಪ್ರಕಾರ, ಒಳಚರಂಡಿ ನೀರಿನ ಸೋರಿಕೆ ಅಥವಾ ಹಾನಿಗೊಳಗಾದ ನೀರಿನ ಪೈಪ್‌ಗಳ ಮೂಲಕ ಇಂತಹ ಬ್ಯಾಕ್ಟೀರಿಯಾಗಳು ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಅಪಾಯವಿದೆ.
ಬ್ಯಾಚ್ ಮಾರಾಟಕ್ಕೆ ನಿರ್ಬಂಧ ಮತ್ತು ಕಾನೂನು ಕ್ರಮಕ್ಕೆ ಅನುಮತಿ
ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ಎಚ್ಚೆತ್ತುಕೊಂಡ ಎಫ್‌ಎಸ್‌ಎಸ್‌ಎಐ, 2026ರ ಆಗಸ್ಟ್ 12ರಂದೇ ಜಲಪೈಗುರಿ ಘಟಕದ ನಿರ್ದಿಷ್ಟ ಬ್ಯಾಚ್‌ನ (PB 201) ನೀರಿನ ಬಾಟಲಿಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿತ್ತು. ಇದೀಗ ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆಗಾಗಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006’ರ ಅಡಿಯಲ್ಲಿ ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ವಿಚಾರಣೆ ನಡೆಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಪ್ರಾಧಿಕಾರವು ಅಧಿಕೃತವಾಗಿ ಅನುಮೋದನೆ ನೀಡಿದೆ.
ಗೋವಾ ಘಟಕದಲ್ಲೂ ಕಂಡುಬಂದಿತ್ತು ಗುಣಮಟ್ಟದ ಲೋಪ
ಬಿಸ್ಲೆರಿ ಕಂಪನಿಗೆ ಇಂತಹ ಸಂಕಷ್ಟ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗೋವಾ ಘಟಕದಿಂದ ಸಂಗ್ರಹಿಸಲಾಗಿದ್ದ ಬಿಸ್ಲೆರಿ ನೀರಿನ ಮಾದರಿಯೂ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಗೋವಾ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಬ್ರೋಮೇಟ್ ಹಾಗೂ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಪತ್ತೆಯಾಗಿದ್ದರಿಂದ, ಅದನ್ನೂ ಅಸುರಕ್ಷಿತ ಎಂದು ಘೋಷಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗಿತ್ತು. ಅಲ್ಲದೆ, ದೇಶಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಎಫ್‌ಎಸ್‌ಎಸ್‌ಎಐ ತೀವ್ರ ನಿಗಾ ವಹಿಸಿದ್ದು, ವಿವಿಧ ರಾಜ್ಯಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುತ್ತಿದೆ ಎಂದು ಎಫ್‌ಎಸ್‌ಎಸ್‌ಎಐ ಸಿಇಒ ರಜಿತ್ ಪುನ್ಹಾನಿ ತಿಳಿಸಿದ್ದಾರೆ.
ಬಿಸ್ಲೆರಿ ಕಂಪನಿಯ ಸ್ಪಷ್ಟನೆ
ಇನ್ನು ಎಫ್‌ಎಸ್‌ಎಸ್‌ಎಐ ಕ್ರಮದ ಕುರಿತು ಬಿಸ್ಲೆರಿ ಇಂಟರ್‌ನ್ಯಾಷನಲ್ ಕಂಪನಿಯು ಸ್ಪಷ್ಟನೆ ನೀಡಿದೆ. ಆಗಸ್ಟ್ 12ರಂದು ಪ್ರಾಧಿಕಾರ ನಿರ್ಬಂಧ ವಿಧಿಸಿದ ತಕ್ಷಣವೇ ತೆಲಿಪಾರಾ ಘಟಕದ ‘PB 201’ ಬ್ಯಾಚ್‌ನ ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ.
ಅಲ್ಲದೆ, ಅದೇ ಬ್ಯಾಚ್‌ನ ಮಾದರಿಗಳನ್ನು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಎರಡು ಪ್ರತ್ಯೇಕ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ನೀರು ಎಲ್ಲಾ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ ಮತ್ತು ಕೋಲಿಫಾರ್ಮ್ ಬ್ಯಾಕ್ಟೀರಿಯಾ ಮಿತಿಯೊಳಗಿದೆ ಎಂಬ ವರದಿ ಬಂದಿದೆ ಎಂದು ಬಿಸ್ಲೆರಿ ಪ್ರತಿಪಾದಿಸಿದೆ. ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳ ವರದಿಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ, ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ವಿಧಾನಗಳ ಕುರಿತು ಸಮಗ್ರ ಮರುಪರಿಶೀಲನೆ ನಡೆಸುವಂತೆ ಕಂಪನಿಯು ಎಫ್‌ಎಸ್‌ಎಸ್‌ಎಐಗೆ ಮನವಿ ಮಾಡಿದೆ. ತಮ್ಮ 10 ಹಂತದ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಬಿಸ್ಲೆರಿ ನೀರು ಕುಡಿಯಲು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಸಮರ್ಥಿಸಿಕೊಂಡಿದೆ.
#Bisleri #FSSAI #WaterContamination #WestBengal #FoodSafety #PackagedDrinkingWater #ColiformBacteria #Jalpaiguri #UdayakalaNews #ConsumerAlert


