Menu

ಮಂಜಿನ ವಾತಾವರಣದಲ್ಲಿ ಜಾಗರೂಕ ಚಾಲನೆ: ಕಟ್ಟುನಿಟ್ಟಿನ ಕ್ರಮಕ್ಕೆ ಚಾಲಕರಿಗೆ KSRTC ಸೂಚನೆ!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯಾದ್ಯಂತ ಚಳಿಗಾಲದ ತೀವ್ರತೆ ಹೆಚ್ಚಾಗುತ್ತಿದ್ದು, ಮುಂಜಾನೆ ಹಾಗೂ ರಾತ್ರಿಯ ವೇಳೆಯಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಎಲ್ಲಾ ಚಾಲಕರಿಗೆ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು, ಪಾದಾಚಾರಿಗಳು ಹಾಗೂ ಇತರ ವಾಹನ ಸವಾರರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ನಿಗಮವು ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಚಳಿಗಾಲದ ಸಂದರ್ಭದಲ್ಲಿ ರಸ್ತೆಗಳಲ್ಲಿ ಗೋಚರತೆ ತೀರಾ ಕಡಿಮೆಯಾಗುವುದರಿಂದ ಸಂಭವಿಸಬಹುದಾದ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ನಿಗಮದ ಬಸ್ಸುಗಳು ರಾಜ್ಯದ ಮೂಲೆಮೂಲೆಗಳಿಗೆ ಹಾಗೂ ಹೊರರಾಜ್ಯಗಳಿಗೆ ದಿನದ 24 ಗಂಟೆಯೂ ಸಂಚರಿಸುವುದರಿಂದ, ವಿಶೇಷವಾಗಿ ರಾತ್ರಿ ಮತ್ತು ಬೆಳಗಿನ ಜಾವದ ಪ್ರಯಾಣದ ವೇಳೆ ಚಾಲಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಕೆಎಸ್‌ಆರ್‌ಟಿ ಆಡಳಿತ ಮಂಡಳಿ ಎಚ್ಚರಿಸಿದೆ.

ವಾಹನ ಹೊರಡುವ ಮುನ್ನ ತಾಂತ್ರಿಕ ತಪಾಸಣೆ ಕಡ್ಡಾಯ

ಚಾಲಕರು ಕರ್ತವ್ಯಕ್ಕೆ ಹಾಜರಾಗಿ ಬಸ್ಸನ್ನು ಡಿಪೋದಿಂದ ಹೊರತೆಗೆಯುವ ಮುನ್ನ ವಾಹನದ ಪ್ರತಿಯೊಂದು ಭಾಗವನ್ನೂ ಕೂಲಂಕಷವಾಗಿ ಪರಿಶೀಲಿಸುವುದು ಕಡ್ಡಾಯವಾಗಿದೆ. ಪ್ರಮುಖವಾಗಿ ವಾಹನದ ಹೆಡ್‌ಲೈಟ್‌ಗಳು, ಇಂಡಿಕೇಟರ್‌ಗಳು, ಬ್ರೇಕ್‌ಲೈಟ್‌ಗಳು ಮತ್ತು ವೈಪರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮಂಜಿನಿಂದಾಗಿ ಗಾಜಿನ ಮೇಲೆ ತೇವಾಂಶ ಸಂಗ್ರಹವಾಗುವುದರಿಂದ ವೈಪರ್‌ಗಳು ಸುಸ್ಥಿತಿಯಲ್ಲಿರುವುದು ಅತ್ಯಗತ್ಯ. ಒಂದು ವೇಳೆ ಚಾಲನೆಯ ಮೊದಲು ಅಥವಾ ನಂತರ ವಾಹನದಲ್ಲಿ ಯಾವುದೇ ಸಣ್ಣ ತಾಂತ್ರಿಕ ದೋಷ ಕಂಡುಬಂದರೂ ಅದನ್ನು ನಿರ್ಲಕ್ಷಿಸದೆ, ತಕ್ಷಣವೇ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳ ಗಮನಕ್ಕೆ ತಂದು ದೋಷವನ್ನು ಸಂಪೂರ್ಣವಾಗಿ ಸರಿಪಡಿಸಿದ ನಂತರವೇ ವಾಹನ ಚಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

ಮಂಜು ಹಾಗೂ ಕಡಿಮೆ ಗೋಚರತೆಯ ವೇಳೆ ಚಾಲನಾ ನಿಯಮಗಳು

ಮಂಜು ಕವಿದ ವಾತಾವರಣದಲ್ಲಿ ವಾಹನ ಚಲಾಯಿಸುವಾಗ ಚಾಲಕರು ಅನುಸರಿಸಬೇಕಾದ ಪ್ರಮುಖ ನಿಯಮಗಳನ್ನು ಕೆಎಸ್‌ಆರ್‌ಟಿ ಸ್ಪಷ್ಟವಾಗಿ ವಿವರಿಸಿದೆ
ದಟ್ಟ ಮಂಜು ಅಥವಾ ಕಡಿಮೆ ಗೋಚರತೆಯ ಸಂದರ್ಭದಲ್ಲಿ ಹೈ-ಬೀಮ್ ಲೈಟ್ ಬಳಸಿದರೆ ಬೆಳಕು ಮಂಜಿನ ಕಣಗಳಿಗೆ ಪ್ರತಿಫಲನಗೊಂಡು ಎದುರಿನ ರಸ್ತೆ ಕಾಣದಂತಾಗುತ್ತದೆ. ಹೀಗಾಗಿ, ಕಡ್ಡಾಯವಾಗಿ ‘ಲೋ-ಬೀಮ್’ ಲೈಟ್‌ಗಳನ್ನು ಬಳಸಿಕೊಂಡು ವಾಹನದ ವೇಗವನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಮುಂದೆ ಸಾಗುತ್ತಿರುವ ವಾಹನಗಳಿಗೂ ಮತ್ತು ಬಸ್ಸಿಗೂ ನಡುವೆ ಸಾಕಷ್ಟು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಲು ಅಗತ್ಯವಿರುವ ಬ್ರೇಕಿಂಗ್ ಅಂತರವನ್ನು ಮೊದಲೇ ಅಂದಾಜಿಸಿಕೊಂಡು ಚಾಲನೆ ಮಾಡಬೇಕು.
ಮಂಜಿನ ವಾತಾವರಣದಲ್ಲಿ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣಿಸದ ಕಾರಣ, ಅನಗತ್ಯವಾಗಿ ಓವರ್‌ಟೇಕ್ ಮಾಡುವುದು ಹಾಗೂ ಅಪಾಯಕಾರಿ ರೀತಿಯಲ್ಲಿ ಪದೇ ಪದೇ ಲೇನ್ ಬದಲಾವಣೆ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
ಹಠಾತ್ ಬ್ರೇಕ್ ಹಾಕುವುದನ್ನು ಮತ್ತು ವಾಹನದ ವೇಗದಲ್ಲಿ ಅನಗತ್ಯ ಏರಿಳಿತಗಳನ್ನು ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.

ಘಾಟ್ ರಸ್ತೆಗಳು ಹಾಗೂ ತಿರುವುಗಳಲ್ಲಿ ವಿಶೇಷ ಎಚ್ಚರಿಕೆ

ಚಳಿಗಾಲದಲ್ಲಿ ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟದ ರಸ್ತೆಗಳಲ್ಲಿ ಮಂಜಿನ ಪ್ರಮಾಣ ಅತ್ಯಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಳೆ, ಮಂಜು ಅಥವಾ ಇಬ್ಬನಿಯಿಂದ ಒದ್ದೆಯಾಗಿ ಜಾರುವ ರಸ್ತೆಗಳಿರುವ ಸಂದರ್ಭದಲ್ಲಿ, ಕಡಿದಾದ ತಿರುವುಗಳಲ್ಲಿ ಮತ್ತು ಘಾಟ್ ರಸ್ತೆಗಳಲ್ಲಿ ಚಾಲಕರು ವಿಶೇಷ ಎಚ್ಚರಿಕೆ ವಹಿಸಬೇಕು. ಇದರ ಜೊತೆಗೆ ವಾಹನದ ಟೈರ್‌ಗಳ ಸವೆತದ ಸ್ಥಿತಿ ಹಾಗೂ ಗಾಳಿಯ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು; ಸುಸ್ಥಿತಿಯಲ್ಲಿರುವ ಟೈರ್‌ಗಳು ಜಾರುವ ರಸ್ತೆಗಳಲ್ಲಿ ವಾಹನಕ್ಕೆ ಉತ್ತಮ ಹಿಡಿತ ನೀಡುತ್ತವೆ ಎಂದು ನಿಗಮ ತಿಳಿಸಿದೆ.

ಪ್ರಯಾಣಿಕರು, ಪಾದಾಚಾರಿಗಳ ಸುರಕ್ಷತೆ ಮತ್ತು ಚಾಲಕರ ಆರೋಗ್ಯ

ಮುಂಜಾನೆ ಹಾಗೂ ರಾತ್ರಿ ವೇಳೆಯಲ್ಲಿ ಮಂಜಿನ ಪ್ರಮಾಣ ಹೆಚ್ಚಿರುವುದರಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಮುಂಜಾನೆ ಸಂಚರಿಸುವ ಶಾಲಾ ವಾಹನಗಳ ಸಮೀಪ ಬಸ್ ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಬೇಕು.

ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ಅವಸರ ಮಾಡದೆ, ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರವೇ ಬಾಗಿಲು ತೆರೆಯುವುದು ಹಾಗೂ ಎಲ್ಲರೂ ಸುರಕ್ಷಿತವಾಗಿ ಹತ್ತಿ-ಇಳಿದ ನಂತರವೇ ಚಾಲನೆ ಪ್ರಾರಂಭಿಸಬೇಕು. ಅಲ್ಲದೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಕಾರಣಕ್ಕೂ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡಬಾರದು; ಇದು ಹಿಂದಿನಿಂದ ಬರುವ ವಾಹನಗಳಿಗೆ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಸಲಾಗಿದೆ.

ದೀರ್ಘ ದೂರದ ಪ್ರಯಾಣದ ವೇಳೆ ಚಾಲಕರು ಅಗತ್ಯ ವಿಶ್ರಾಂತಿ ಪಡೆಯುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಆಯಾಸ ಅಥವಾ ನಿದ್ರಾಹೀನ ಸ್ಥಿತಿಯಲ್ಲಿ ಚಾಲನೆ ಮಾಡಬಾರದು. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸುವ ಮೂಲಕ ಅಪಘಾತ ರಹಿತ ಸೇವೆಯನ್ನು ನೀಡಲು ಎಲ್ಲಾ ಚಾಲಕರು ಕೈಜೋಡಿಸಬೇಕು ಎಂದು ಕೆಎಸ್‌ಆರ್‌ಟಿ ಮನವಿ ಮಾಡಿದೆ.
#KSRTC #WinterSafety #FogAlert #RoadSafety #KarnatakaNews #BengaluruNews #SafeDriving #KSRTCDrivers #TrafficRules #UdayakalaNews #WinterFog #PublicTransport #KarnatakaTransport

Related Posts

Leave a Reply

Your email address will not be published. Required fields are marked *