ಉದಯಕಾಲ ನ್ಯೂಸ್, ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಹಾಗೂ ರಾಜ್ಯದ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಳೆದ ನವೆಂಬರ್ 7ರಂದು ನಡೆದಿದ್ದ ಈ ಬಾಂಬ್ ಬೆದರಿಕೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆಟೋ ಚಾಲಕನ ಮೊಬೈಲ್ ಫೋನ್ ಬಳಸಿಕೊಂಡು ಪೊಲೀಸರಿಗೆ ಕರೆ ಮಾಡಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ? ಆಟೋ ಬುಕ್ಕಿಂಗ್ ನಾಟಕ!
ಕಳೆದ ನವೆಂಬರ್ 7ರಂದು ಭಗವಂತರಾಯನ್ (ಭಗವಂತಪ್ಪ) ಎಂಬುವವರು ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಈ ವೇಳೆ ಆರೋಪಿ ಕಾರ್ತಿಕ್ ಆ್ಯಪ್ ಮೂಲಕ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಆಟೋ ಬುಕ್ ಮಾಡಿದ್ದಾನೆ. ಆಟೋ ಬುಕ್ ಮಾಡಿದ ಕಾರ್ತಿಕ್, ಪಿಕಪ್ ಲೊಕೇಶನ್ ಅನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಸಮೀಪಕ್ಕೆ ಹಾಕಿದ್ದನು.
ನಿಗದಿತ ಲೊಕೇಶನ್‌ಗೆ ತೆರಳಿದ ಆಟೋ ಚಾಲಕ, ಪ್ರಯಾಣಿಕನನ್ನು ಕರೆದುಕೊಳ್ಳಲು ಬುಕ್ಕಿಂಗ್ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಕಾರ್ತಿಕ್, ನಾನು ಈಗ ಸಿಎಂ ಅವರ ಮನೆಯೊಳಗೆ ಇದ್ದೇನೆ. ಹೊರಗೆ ಬ್ಯಾರಿಕೇಡ್ ಬಳಿ ಭದ್ರತೆಗೆ ಪೊಲೀಸರು ಇದ್ದಾರೆ, ಅವರಿಗೆ ಫೋನ್ ಕೊಡಿ ಎಂದು ಆಟೋ ಚಾಲಕನಿಗೆ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಆಟೋ ಚಾಲಕ, ಅಲ್ಲಿದ್ದ ಪೊಲೀಸರಿಗೆ ತಮ್ಮ ಮೊಬೈಲ್ ಫೋನ್ ನೀಡಿದ್ದಾರೆ.
ಪೊಲೀಸರು ಫೋನ್ ತೆಗೆದುಕೊಳ್ಳುತ್ತಿದ್ದಂತೆ ಬಾಂಬ್ ಬೆದರಿಕೆ!
ಬ್ಯಾರಿಕೇಡ್ ಬಳಿಯಿದ್ದ ಪೊಲೀಸರು ಫೋನ್ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಆರೋಪಿ ಕಾರ್ತಿಕ್, ಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ಇಡಲಾಗಿದೆ; ಮುಖ್ಯಮಂತ್ರಿಗಳ ಬೆಂಗಾವಲು ಪಡೆ ತೆರಳುವ ವೇಳೆ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಹಾಕಿ ತಕ್ಷಣವೇ ಕರೆ ಕಟ್ ಮಾಡಿದ್ದಾನೆ.

ಭದ್ರತಾ ಪಡೆಗಳ ತೀವ್ರ ತಪಾಸಣೆ; ಹುಸಿ ಕರೆ ಎಂದು ದೃಢ
ಈ ಅನಾಮಿಕ ಕರೆಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ತಕ್ಷಣವೇ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡಗಳು ಸಿಎಂ ನಿವಾಸ ಮತ್ತು ವಿಧಾನಸೌಧದ ಆವರಣದಲ್ಲಿ ಸುದೀರ್ಘ ತಪಾಸಣೆ ನಡೆಸಿದವು. ಸುದೀರ್ಘ ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.
ಸದಾಶಿವನಗರ ಠಾಣೆಯಲ್ಲಿ ಪ್ರಕರಣ
ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಮೊಬೈಲ್ ಲೊಕೇಶನ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ, ಪೋಷಕರಿಂದ ದೂರವಾಗಿ ಮನೆಯಿಂದ ಹೊರಗುಳಿದಿದ್ದ ಕಾರ್ತಿಕ್ ಪಿಜಿಯೊಂದರಲ್ಲಿ ವಾಸವಾಗಿದ್ದು, ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಈತ ಈ ಹಿಂದೆಯೂ ಇದೇ ರೀತಿ ಹಲವು ಬಾರಿ ಹುಸಿ ಬೆದರಿಕೆ ಕರೆಗಳನ್ನು ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
#CMDKShivakumar #BombThreat #VidhanaSoudha #BengaluruPolice #Sadashivanagar #HoaxCall #CrimeNews #KarnatakaCM #Udayakala #BengaluruNews


