Menu

ಬರ ನಿಧಿಗಾಗಿ ಮೋದಿ, ಶಾ, ಚೌಹಾಣ್​​ಗೆ ಡಿಸಿಎಂ ಪತ್ರದ ಮೇಲೆ ಪತ್ರ; ರಾಜ್ಯಕ್ಕೆ ಬಾರದ ಬರ ಪರಿಹಾರ!

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದಲ್ಲಿ ಬಂದೊದಗಿರುವ ತೀವ್ರ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯ ಸರ್ಕಾರ ಕೇಳಿರುವ ಬರ ಪರಿಹಾರದ ಹಣವನ್ನು ವಿಳಂಬ ಮಾಡದೇ ಬಿಡುಗಡೆ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಪತ್ರದ ಮೇಲೆ ಪತ್ರ ಬರೆಯುತ್ತಿದ್ದರೂ ದಪ್ಪ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡದೆ ಮಲತಾಯಿ ಧೋರಣೆ ತೋರುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರಗಳನ್ನು ಬರೆದಿರುವ ಡಿಸಿಎಂ ಪರಮೇಶ್ವರ ಅವರು, ರಾಜ್ಯದ ರೈತರು ಎದುರಿಸುತ್ತಿರುವ ಭೀಕರ ಸಂಕಷ್ಟದ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ಅಗತ್ಯ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಲು ಮೂವರ ಭೇಟಿಗೂ ಮತ್ತೊಮ್ಮೆ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ರೂ. 2,481.88 ಕೋಟಿ ಬೆಳೆ ನಷ್ಟ: ರೂ. 22,400.58 ಕೋಟಿ ಬರ ನಿಧಿಗೆ ಮನವಿ

ನವೆಂಬರ್ 2ರಂದು ತಾವು ಈ ಹಿಂದೆ ಬರೆದಿದ್ದ ಪತ್ರಗಳನ್ನು ಉಲ್ಲೇಖಿಸಿರುವ ಡಾ. ಜಿ. ಪರಮೇಶ್ವರ ಅವರು, ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ. ರಾಜ್ಯದ ಬರೋಬ್ಬರಿ 226 ತಾಲ್ಲೂಕುಗಳು ಬರದಿಂದ ತೀವ್ರವಾಗಿ ಬಾಧಿತವಾಗಿವೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಅಂದಾಜು ರೂ.62,481.88 ಕೋಟಿ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ರೂ.22,400.58 ಕೋಟಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರದಿಂದ ಪರಿಷ್ಕೃತ ಸಮಗ್ರ ಮನವಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ಅಂಕಿ-ಅಂಶಗಳ ಹಿಂದೆ ಲಕ್ಷಾಂತರ ರೈತ ಕುಟುಂಬಗಳ ಕಣ್ಣೀರು, ನೋವು ಮತ್ತು ಬದುಕಿನ ಸಂಕಷ್ಟವಿದೆ. ಬೆಳೆ ಕಳೆದುಕೊಂಡ ಅನೇಕ ರೈತರು ತಮ್ಮ ಏಕೈಕ ಆದಾಯದ ಮೂಲವನ್ನೇ ಕಳೆದುಕೊಂಡಿದ್ದಾರೆ. ಕೈಯಲ್ಲಿದ್ದ ಉಳಿತಾಯದ ಹಣವನ್ನೂ ಖರ್ಚು ಮಾಡಿಕೊಂಡು ಅಸಹಾಯಕರಾಗಿದ್ದಾರೆ. ದಿನನಿತ್ಯದ ಜೀವನ ನಡೆಸಲು, ಕೃಷಿ ಸಾಲ ಮರುಪಾವತಿಸಲು ಹಾಗೂ ಮುಂದಿನ ಹಂಗಾಮಿನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ರೈತರ ದಯನೀಯ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದಲೇ ಮೊದಲ ಕಂತಿನ ಪರಿಹಾರ ಬಿಡುಗಡೆ

ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ಕಂದಾಯ ಸಚಿವರು, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ನೆರವಾಗಲು ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲಗಳಿಂದಲೇ ಈಗಾಗಲೇ ಮೊದಲ ಕಂತಿನ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ಅರ್ಹ ರೈತರಿಗೆ ಕನಿಷ್ಠ ರೂ.5,000 ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬರುವವರೆಗೆ ರೈತರನ್ನು ಕಾಯಿಸಬಾರದು ಎಂಬ ಮಾನವೀಯ ಉದ್ದೇಶದಿಂದ ರಾಜ್ಯ ಸರ್ಕಾರವೇ ಮೊದಲು ನೆರವಿಗೆ ಮುಂದಾಗಿದೆ. ಆದರೆ, ರಾಜ್ಯದಲ್ಲಿ ಉಂಟಾಗಿರುವ ಬರದ ತೀವ್ರತೆ ಹಾಗೂ ಕೃಷಿ ಕ್ಷೇತ್ರದಲ್ಲಿನ ಭಾರಿ ನಷ್ಟವನ್ನು ಗಮನಿಸಿದರೆ, ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದ ಮಾತ್ರ ಈ ಬೃಹತ್ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಭಾಯಿಸುವುದು ಕಷ್ಟಸಾಧ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಗತ್ಯ ಪರಿಹಾರ ದೊರೆಯದೆ ದಿನಗಳು ಕಳೆದಂತೆ ಗ್ರಾಮೀಣ ಭಾಗದ ಕುಟುಂಬಗಳ ಸಂಕಷ್ಟ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.ಇದರಿಂದ ರೈತರು ಆರ್ಥಿಕವಾಗಿ ಮತ್ತೆ ಚೇತರಿಸಿಕೊಳ್ಳುವುದೂ ಕಷ್ಟವಾಗುತ್ತದೆ ಎಂದು ಡಿಸಿಎಂ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ನೈಸರ್ಗಿಕ ವಿಕೋಪಗಳಿಗೆ ರಾಜಕೀಯ ಗಡಿಗಳಿಲ್ಲ – ಕೇಂದ್ರಕ್ಕೆ ಡಿಸಿಎಂ ಕಿವಿಮಾತು

ಕೇಂದ್ರ ಸರ್ಕಾರದ ವಿಳಂಬ ಧೋರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಡಾ. ಜಿ. ಪರಮೇಶ್ವರ ಅವರು, ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಸಹಕಾರವನ್ನು ಪದೇಪದೆ ಕೇಳಿದ್ದೇವೆ. ಆದರೆ ರಾಜ್ಯದ ಅನೇಕ ನ್ಯಾಯಯುತ ಬೇಡಿಕೆಗಳಿಗೆ ಈವರೆಗೂ ಸೂಕ್ತ ಸ್ಪಂದನೆ ದೊರೆತಿಲ್ಲ. ಲಕ್ಷಾಂತರ ರೈತ ಕುಟುಂಬಗಳ ಬದುಕಿನ ಮೇಲೆ ನೇರ ಪರಿಣಾಮ ಬೀರಿರುವ ಇಂತಹ ಗಂಭೀರ ಸಂಕಷ್ಟದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಅಗತ್ಯ ಗಮನ ಹರಿಸದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದಿದ್ದಾರೆ.

ಮುಂದುವರಿದು, ನೈಸರ್ಗಿಕ ವಿಕೋಪಗಳಿಗೆ ರಾಜಕೀಯ ಗಡಿಗಳಾಗಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಲಿ ಇರುವುದಿಲ್ಲ. ಇಂತಹ ತುರ್ತು ಸಂದರ್ಭಗಳಲ್ಲಿ ನಾವು ಕೈಗೊಳ್ಳುವ ಕ್ರಮಗಳಲ್ಲಿಯೂ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ಇರಬಾರದು. ಲಕ್ಷಾಂತರ ಜನರ ಬದುಕು ಮತ್ತು ಜೀವನೋಪಾಯದ ಪ್ರಶ್ನೆ ಎದುರಾದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವುದೇ ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಅನಿರ್ದಿಷ್ಟಾವಧಿಯವರೆಗೆ ರೈತರನ್ನು ಕಾಯಿಸಬೇಡಿ: ತುರ್ತು ನೆರವಿಗೆ ಒತ್ತಾಯ

ಸರ್ಕಾರಗಳು ಬರಗಾಲದ ಸಂದರ್ಭದಲ್ಲಿ ಕೇವಲ ತಕ್ಷಣದ ಪರಿಹಾರ ನೀಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಒಂದು ವರ್ಷ ಮಳೆ ಕೈಕೊಟ್ಟರೆ ಇಡೀ ರೈತ ಕುಟುಂಬ ಸಾಲದ ಸುಳಿಗೆ ಸಿಲುಕುವ ಅಥವಾ ಹಲವು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ಬರಬಾರದು. ಇಂತಹ ಸಂದರ್ಭಗಳಲ್ಲಿಯೂ ರೈತರು ತಮ್ಮ ಜೀವನವನ್ನು ಸ್ವಾಭಿಮಾನದಿಂದ ಮುಂದುವರಿಸಲು ಸಾಧ್ಯವಾಗುವಂತೆ ಕೃಷಿ ಕ್ಷೇತ್ರವನ್ನು ಬಲಪಡಿಸಬೇಕು ಎಂದು ಡಿಸಿಎಂ ತಿಳಿಸಿದ್ದಾರೆ.

ಕೊನೆಯದಾಗಿ, ಕರ್ನಾಟಕದ ರೈತರು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಆಹಾರ ಭದ್ರತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪೂರ್ಣ ಬೆಂಬಲ ದೊರೆಯಬೇಕು. ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಷ್ಕೃತ ಬರ ಪರಿಹಾರದ ಮನವಿಗೆ ಹೆಚ್ಚಿನ ಆದ್ಯತೆ ನೀಡಿ, ಕೇಳಿರುವ ರೂ.22,400.58 ಕೋಟಿ ಆರ್ಥಿಕ ನೆರವಿಗೆ ಶೀಘ್ರ ಅನುಮೋದನೆ ನೀಡಬೇಕು. ರೈತರ ಸಮಸ್ಯೆಗಳನ್ನು ಆಲಿಸಲು ಹಾಗೂ ಅವರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲು ಅನಗತ್ಯವಾಗಿ ವಿಳಂಬ ಮಾಡಬಾರದು. ತಮ್ಮ ಸಮಸ್ಯೆಗಳಿಗೆ ಸ್ಪಂದನೆ ದೊರೆಯುವುದಕ್ಕಾಗಿ ರೈತರು ಅನಿರ್ದಿಷ್ಟಾವಧಿಯವರೆಗೆ ಕಾಯುವ ಪರಿಸ್ಥಿತಿ ಬರಬಾರದು” ಎಂದು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವರನ್ನು ಡಾ. ಜಿ. ಪರಮೇಶ್ವರ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
#KarnatakaDrought #GParameshwara #DroughtRelief #NarendraModi #AmitShah #ShivrajSinghChouhan #NDRF #KarnatakaFarmers #KarnatakaPolitics #BengaluruNews #UdayakalaNews #KannadaNews

Related Posts

Leave a Reply

Your email address will not be published. Required fields are marked *