Menu

ಅಕ್ರಮ ವಿದ್ಯುತ್ ಬೇಲಿಗೆ ಕಾಡಾನೆ ಬಲಿ; ತಂದೆ-ಮಗನ ಬಂಧನ!

ಉದಯಕಾಲ ನ್ಯೂಸ್, ಕಾರವಾರ/ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದ ಮತ್ತೊಂದು ದಾರುಣ ಅಧ್ಯಾಯ ತೆರೆದುಕೊಂಡಿದೆ. ಬೆಳೆ ರಕ್ಷಣೆಗಾಗಿ ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ, ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ಆಘಾತಕಾರಿ ಘಟನೆ ಶಿರಸಿ ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.

ಮಳಲಗಾಂವ್ ಗ್ರಾಮದ ನಿವಾಸಿಗಳಾದ ಶಿವಪ್ಪ ನಾಯ್ಕ (76) ಹಾಗೂ ಅವರ ಪುತ್ರ ನಾಗರಾಜ್ ನಾಯ್ಕ (40) ಬಂಧಿತ ಆರೋಪಿಗಳಾಗಿದ್ದಾರೆ. ಕಾಡಾನೆಗಳ ಉಪಟಳದಿಂದ ತಮ್ಮ ಕಟಾವಿಗೆ ಬಂದ ಭತ್ತದ ಬೆಳೆಯನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಈ ಇಬ್ಬರು ತಮ್ಮ ಜಮೀನಿನ ಸುತ್ತಲೂ ತಂತಿಬೇಲಿಯನ್ನು ಅಳವಡಿಸಿದ್ದರು. ಆದರೆ, ಕಾನೂನುಬಾಹಿರವಾಗಿ ಸಮೀಪದ ವಿದ್ಯುತ್ ಲೈನ್‌ನಿಂದ ನೇರವಾಗಿ ಈ ತಂತಿಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಗದ್ದೆಯತ್ತ ನುಗ್ಗಿದ ಗಂಡಾನೆಯೊಂದು ಈ ಅಪಾಯಕಾರಿ ವಿದ್ಯುತ್ ಬೇಲಿಯನ್ನು ಸ್ಪರ್ಶಿಸಿದ್ದು, ತೀವ್ರ ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಸ್ಥಳಕ್ಕೆ ಡಿಸಿಎಫ್ ಭೇಟಿ, ಆರೋಪಿಗಳಿಂದ ತಪ್ಪೊಪ್ಪಿಗೆ

ಬೆಳಗಿನ ಜಾವ ಗದ್ದೆಯ ಬಳಿ ಕಾಡಾನೆ ಮೃತಪಟ್ಟು ಬಿದ್ದಿರುವ ವಿಚಾರ ಸ್ಥಳೀಯರ ಮೂಲಕ ಅರಣ್ಯ ಇಲಾಖೆಗೆ ತಿಳಿದುಬಂದಿದೆ. ತಕ್ಷಣವೇ ಶಿರಸಿ ವಿಭಾಗದ ಬನವಾಸಿ ವೃತ್ತದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸಂದೀಪ್ ಹಿಂದೂರಾವ್ ಸೂರ್ಯವಂಶಿ ಅವರೂ ಸಹ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಜಮೀನಿನ ಮಾಲೀಕರಾದ ಶಿವಪ್ಪ ನಾಯ್ಕ ಮತ್ತು ನಾಗರಾಜ್ ನಾಯ್ಕ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಬೆಳೆ ಉಳಿಸಿಕೊಳ್ಳುವ ಸಲುವಾಗಿ ವಿದ್ಯುತ್ ಕಂಬದ ಲೈನ್‌ನಿಂದ ನೇರವಾಗಿ ಬೇಲಿಗೆ ವಿದ್ಯುತ್ ಹರಿಸಿರುವುದಾಗಿ ಇಬ್ಬರೂ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಬಳಿಕ ಪಶುವೈದ್ಯಾಧಿಕಾರಿಗಳ ತಂಡದಿಂದ ಮೃತ ಗಂಡಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಒಂದು ತಿಂಗಳಿನಿಂದ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು

ಕಳೆದ ಒಂದು ತಿಂಗಳಿನಿಂದ ಮುಂಡಗೋಡು ಹಾಗೂ ಶಿರಸಿ ತಾಲೂಕಿನ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಹಗಲು ವೇಳೆ ಕಾಡಿನಲ್ಲಿರುವ ಈ ಆನೆಗಳು, ರಾತ್ರಿಯಾಗುತ್ತಿದ್ದಂತೆಯೇ ಸಮೀಪದ ಗ್ರಾಮಗಳ ಕೃಷಿ ಜಮೀನು ಹಾಗೂ ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮಿಸಿ ಆನೆಗಳ ಹಿಂಡನ್ನು ಮರಳಿ ದಟ್ಟ ಅರಣ್ಯದತ್ತ ಅಟ್ಟುವ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಆದರೂ ಸಹ ಆಹಾರ ಅರಸುತ್ತಾ ಆನೆಗಳು ಮತ್ತೆ ಮತ್ತೆ ಗ್ರಾಮದ ಕೃಷಿ ಭೂಮಿಯತ್ತ ಮುಖ ಮಾಡುತ್ತಿರುವುದು ಇಲಾಖೆಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಕ್ರಮ ವಿದ್ಯುತ್ ಬೇಲಿ ಅಳವಡಿಸದಂತೆ ಇಲಾಖೆ ಎಚ್ಚರಿಕೆ

ಬೆಳೆ ರಕ್ಷಣೆಗಾಗಿ ಸೋಲಾರ್ ಬೇಲಿ ಅಥವಾ ಇಲಾಖೆ ಸೂಚಿಸುವ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಬದಲು, ಕೆಲವು ರೈತರು ವಿದ್ಯುತ್ ಕಂಬಗಳಿಂದ ನೇರವಾಗಿ ಅಕ್ರಮ ವಿದ್ಯುತ್ ಹರಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂತಹ ಕೃತ್ಯಗಳಿಂದ ಕೇವಲ ಆನೆಗಳಂತಹ ಅಮೂಲ್ಯ ವನ್ಯಜೀವಿಗಳು ಮಾತ್ರವಲ್ಲದೆ, ಅರಿವಿಲ್ಲದೆ ಓಡಾಡುವ ಸಾರ್ವಜನಿಕರು ಹಾಗೂ ಜಾನುವಾರುಗಳ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತದೆ.

ಪ್ರಸ್ತುತ ಬನವಾಸಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿತ ತಂದೆ ಮತ್ತು ಮಗನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಇನ್ನು ಮುಂದೆ ಯಾವುದೇ ರೈತರು ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ವನ್ಯಜೀವಿಗಳ ಸಾವಿಗೆ ಕಾರಣವಾದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

#SirsiNews #UttaraKannada #WildElephantDeath #HumanWildlifeConflict #BanavasiForest #IllegalElectricFence #KarnatakaNews #UdayakalaNews

Related Posts

Leave a Reply

Your email address will not be published. Required fields are marked *