Saturday, November 21, 2026
Menu

ಕಾಂಗೋದಲ್ಲಿ ಕರ್ನಾಟಕದ 95 ಹಕ್ಕಿಪಿಕ್ಕಿಗರ ಬಂಧನ: ಬಂಧಿತರ ಕುಟುಂಬಸ್ಥರಲ್ಲಿ ತೀವ್ರ ಆತಂಕ

ಉದಯಕಾಲ ನ್ಯೂಸ್, ಶಿವಮೊಗ್ಗ: ಸಾಂಪ್ರದಾಯಿಕ ಗಿಡಮೂಲಿಕೆ ಹಾಗೂ ತೈಲದ ವ್ಯಾಪಾರಕ್ಕಾಗಿ ಪ್ರವಾಸಿ ವೀಸಾದಲ್ಲಿ ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 95 ಮಂದಿಯನ್ನು ಅಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಗ್ರಾಮದ 25 ಮಂದಿ ಸೇರಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇತ್ತ ತವರಿನಲ್ಲಿರುವ ಅವರ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮತ್ತು ಆಕ್ರಂದನ ಮನೆಮಾಡಿದೆ.

 ರಾಜಧಾನಿ ಕಿನ್ಶಾಸಾಗೆ ಸ್ಥಳಾಂತರ; ಗಡಿಪಾರು ಪ್ರಕ್ರಿಯೆ ಆರಂಭ

ಲಭ್ಯ ಮಾಹಿತಿಯ ಪ್ರಕಾರ, ಕಾಂಗೋ ದೇಶದ ಬೆನಿ ಮತ್ತು ಕಿಸಂಗಾನಿ ನಗರಗಳಲ್ಲಿ ವಾಸಿಸುತ್ತಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದವರ ಮೇಲೆ ದಾಳಿ ನಡೆಸಿದ ಅಲ್ಲಿನ ವಲಸೆ ಇಲಾಖೆ ಅಧಿಕಾರಿಗಳು 95 ಮಂದಿಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರೆಲ್ಲರನ್ನೂ ಕಾಂಗೋದ ರಾಜಧಾನಿ ಕಿನ್ಶಾಸಾಗೆ ಕರೆತರಲಾಗಿದ್ದು, ಸದ್ಯ ವಲಸೆ ಅಧಿಕಾರಿಗಳ ವಶದಲ್ಲಿ ಇರಿಸಲಾಗಿದೆ. ವೀಸಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬಂಧಿತರನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಅಲ್ಲಿನ ಆಡಳಿತ ಆರಂಭಿಸಿದೆ ಎಂದು ತಿಳಿದುಬಂದಿದೆ.

ತಲಾ 5 ಲಕ್ಷ ರೂ. ವಸೂಲಿ ಮಾಡಿ ಪರಾರಿಯಾದ ಏಜೆಂಟರು!

ಹಕ್ಕಿಪಿಕ್ಕಿ ಸಮುದಾಯದವರು ವಿದೇಶಿ ನೆಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸಮುದಾಯದ ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಆರ್. ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಬಂಧಿತರನ್ನು ಸುರಕ್ಷಿತವಾಗಿ ತವರಿಗೆ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಸ್ಥಳೀಯ ಏಜೆಂಟರ ಬೃಹತ್ ವಂಚನೆ ಜಾಲದ ಬಗ್ಗೆ ಗಂಭೀರ ಆರೋಪ ಮಾಡಿರುವ ಅವರು, ಹಕ್ಕಿಪಿಕ್ಕಿ ಸಮುದಾಯದ ಮುಗ್ಧ ಜನರನ್ನು ವಿದೇಶಕ್ಕೆ ಕಳುಹಿಸಿ ಉತ್ತಮ ವ್ಯಾಪಾರ ಮಾಡಿಸುವುದಾಗಿ ನಂಬಿಸಿದ ಸ್ಥಳೀಯ ಏಜೆಂಟರು ಪ್ರತಿಯೊಬ್ಬರಿಂದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾರೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಿದೇಶಕ್ಕೆ ಕಳುಹಿಸಿದ್ದ ಏಜೆಂಟರು ಈಗ ನಾಪತ್ತೆಯಾಗಿದ್ದಾರೆ. ಕಾಂಗೋದಲ್ಲಿ ನಮ್ಮ ಸಮುದಾಯದವರು ಬಂಧನಕ್ಕೊಳಗಾಗಲು ನಕಲಿ ದಾಖಲೆಗಳ ಬಳಕೆ ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ನಡೆಸಿರುವುದೇ ಪ್ರಮುಖ ಕಾರಣವಾಗಿದೆ ಎಂದು ವಿವರಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿದ ಏಜೆಂಟರ ವಿರುದ್ಧ ಸಮಗ್ರ ತನಿಖೆಗೆ ಆಗ್ರಹ

ವಿದೇಶಕ್ಕೆ ಕಳುಹಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ಪುನೀತ್ ಕುಮಾರ್, ಬಡತನದಲ್ಲಿರುವ ಹಕ್ಕಿಪಿಕ್ಕಿ ಸಮುದಾಯದವರಿಗೆ ವಿದೇಶಕ್ಕೆ ತೆರಳಲು ಅಗತ್ಯವಿರುವ ನಕಲಿ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟವರು ಯಾರು? ವೀಸಾ ಪ್ರಕ್ರಿಯೆಯಲ್ಲಿ ಸ್ಥಳೀಯ ಏಜೆಂಟರ ಪಾತ್ರವೇನು ಹಾಗೂ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಪೊಲೀಸರು ಮತ್ತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗೋದಲ್ಲಿರುವ 200ಕ್ಕೂ ಹೆಚ್ಚು ಕನ್ನಡಿಗರಲ್ಲೂ ಭೀತಿ; ರಕ್ಷಣೆಗೆ ಮೊರೆ

ಪ್ರಸ್ತುತ ಆಫ್ರಿಕಾದ ಕಾಂಗೋ ದೇಶದ ವಿವಿಧ ನಗರಗಳಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 200ಕ್ಕೂ ಹೆಚ್ಚು ಮಂದಿ ಗಿಡಮೂಲಿಕೆ ವ್ಯಾಪಾರಕ್ಕಾಗಿ ನೆಲೆಸಿದ್ದಾರೆ. ಇದೀಗ ಏಕಾಏಕಿ 95 ಮಂದಿ ಬಂಧನಕ್ಕೊಳಗಾಗಿರುವುದರಿಂದ ಅಲ್ಲಿರುವ ಉಳಿದ ಹಕ್ಕಿಪಿಕ್ಕಿ ಸಮುದಾಯದವರಲ್ಲಿಯೂ ತೀವ್ರ ಭೀತಿ ಮತ್ತು ಅನಿಶ್ಚಿತತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯವು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ ಭಾರತೀಯ ಹಕ್ಕಿಪಿಕ್ಕಿ ಸಮುದಾಯದವರನ್ನು ಗುರುತಿಸಿ, ಅವರ ಸುರಕ್ಷತೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಬೇಕು ಹಾಗೂ ಅಗತ್ಯವಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ತವರಿಗೆ ಮರಳಿಸಲು ಅಗತ್ಯ ನೆರವು ನೀಡಬೇಕು ಎಂದು ಸಮುದಾಯದ ಮುಖಂಡರು ಮತ್ತು ಬಂಧಿತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
#HakkiPikkiTribals #CongoArrest #ShivamoggaNews #Davanagere #Channagiri #IndianEmbassy #MEAIndia #VisaFraud #KarnatakaNews #BreakingNews #UdayakalaNews

Related Posts

Leave a Reply

Your email address will not be published. Required fields are marked *