Saturday, November 21, 2026
Menu

ಬರದ ನಾಡಿಗೆ ನೀರು ಹರಿಸಿದ್ದೇವೆ, ವಿಪಕ್ಷಗಳು ಮಾಡಿದ್ದಿದ್ದರೆ ಶರಣಾಗುತ್ತಿದ್ದೆ: ಹಿರಿಯೂರಿನಲ್ಲಿ ಸಿಎಂ ಡಿಕೆಶಿ ಗುಡುಗು!

ಉದಯಕಾಲ ನ್ಯೂಸ್, ಚಿತ್ರದುರ್ಗ: ಬರಪೀಡಿತ ಹಿರಿಯೂರು ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ. ಬರದ ನಾಡಿಗೆ ಭದ್ರಾ ನೀರು ಹರಿಸುವ ಐತಿಹಾಸಿಕ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡಿದ್ದರೆ ಅವರಿಗೆ ನಾನು ಶರಣಾಗುತ್ತಿದ್ದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರಜಾಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಸಂಸದ ಗೋವಿಂದ ಕಾರಜೋಳ ಖಾಲಿ ಡಬ್ಬ: ಉಪಚುನಾವಣೆ ಸೋಲಿನ ಕುರಿತು ಸಿಎಂ ವ್ಯಂಗ್ಯ

ಸಮಾವೇಶದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಖಾಲಿ ಡಬ್ಬದಂತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಸಂಸತ್ತಿನಲ್ಲಿ ಏನನ್ನೂ ಮಾತನಾಡಿಲ್ಲ ಮತ್ತು ಕೇಂದ್ರದಿಂದ ಅನುದಾನವನ್ನೂ ತಂದಿಲ್ಲ. ನಾನು ಅಭಿವೃದ್ಧಿ ಮಾಡಿಲ್ಲ ಎಂದಾದರೆ ಜನರು ನನ್ನನ್ನು ನೇರವಾಗಿ ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

ಮುಂದುವರಿದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಲೇವಡಿ ಮಾಡಿದ ಅವರು, ಬಿಜೆಪಿಯವರ ವಿಚಾರ ನಮಗೆ ಬೇಡ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ಮತ್ತು ಬಸವರಾಜ ಬೊಮ್ಮಾಯಿ ಅವರ ಮಗ ಗೆದ್ದಿದ್ದಾರೆಯೇ? ಜನರಿಗೆ ನಂಬಿಕೆ ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ, ರಾಜಕಾರಣಕ್ಕೆ ಜನರ ವಿಶ್ವಾಸ ಅಷ್ಟೇ ಮುಖ್ಯ. ಹಿರಿಯೂರಿನ ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆಯಿದೆ ಎಂದರು.

ಭದ್ರಾ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿ

ಹಿರಿಯೂರು ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿಯಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 244 ಕೋಟಿ ರೂಪಾಯಿ ವೆಚ್ಚ ಮಾಡಿ ಕ್ಷೇತ್ರದ ಕೆರೆಗಳನ್ನು ತುಂಬಿಸಿದ್ದೇವೆ. ಬಿಜೆಪಿಯವರು ನಿಜವಾಗಿಯೂ ಕಾಳಜಿ ಹೊಂದಿದ್ದರೆ ಕೇಂದ್ರದಿಂದ ಬರಬೇಕಾದ 5,300 ಕೋಟಿ ರೂಪಾಯಿ ಅನುದಾನ ತರಲು ಪ್ರಯತ್ನಿಸಬೇಕು. ಇತ್ತ ಜೆಡಿಎಸ್‌ನವರು ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ (ST) ಪ್ರಮಾಣ ಪತ್ರ ಕೊಡಿಸುವ ಕೆಲಸ ಮಾಡಬೇಕು. ಬರದ ನಾಡಿಗೆ ನೀರು ಕೊಡುವ ಕೆಲಸವನ್ನು ಜೆಡಿಎಸ್ ಮತ್ತು ಬಿಜೆಪಿ ಮಾಡಿದ್ದರೆ ಅವರಿಗೆ ಶರಣಾಗುತ್ತಿದ್ದೆ. ಹಿರಿಯೂರಿನ ಜನರು ನಿಮ್ಮ ಊರಿಗೆ ಬರದಂತೆ ಬಹಿಷ್ಕಾರ ಹಾಕುವ ಪರಿಸ್ಥಿತಿ ನಿಮಗೆ ಬರಬಾರದು ಎಂದು ಎಚ್ಚರಿಸಿದರು.

ಗ್ಯಾರಂಟಿ ಯೋಜನೆಗಳು, 30×40 ನಿವೇಶನ ಮತ್ತು ‘ನೇಗಿಲ ಯೋಗಿ’ ಯೋಜನೆ ಘೋಷಣೆ

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದ ಸಿಎಂ, ನಿಮಗೆ ಉಚಿತ ವಿದ್ಯುತ್ ಸಿಗುತ್ತಿದೆಯೇ? ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬರುತ್ತಿದೆಯೇ? ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ತಲುಪುತ್ತಿದೆಯೇ?” ಎಂದು ಸಭಿಕರನ್ನು ಪ್ರಶ್ನಿಸಿದರು. ಕೆಲ ಫಲಾನುಭವಿಗಳ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ತಾಂತ್ರಿಕ ವ್ಯತ್ಯಾಸಗಳಿರುವುದರಿಂದ ಹಣ ತಲುಪುವಲ್ಲಿ ವಿಳಂಬವಾಗಿದ್ದು, ಸರಿಯಾದ ಖಾತೆ ಸಂಖ್ಯೆ ನೀಡಿದರೆ ಪರಿಶೀಲನೆ ನಡೆಸಿ ಅರ್ಹರೆಲ್ಲರಿಗೂ ಹಣ ತಲುಪಿಸುವುದು ನನ್ನ ಗುರಿ ಎಂದರು.

ಇದೇ ವೇಳೆ ಕ್ಷೇತ್ರದ ಜನತೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್, ರೈತರಿಗಾಗಿ ‘ನೇಗಿಲ ಯೋಗಿ’ ಯೋಜನೆ ಜಾರಿಗೊಳಿಸಿದ್ದು, ಸರ್ಕಾರದಿಂದ ತೇಗದ ಸಸಿಗಳನ್ನು ನೀಡುತ್ತೇವೆ. ಅವುಗಳನ್ನು ಮಕ್ಕಳಂತೆ ಜೋಪಾನವಾಗಿ ಬೆಳೆಸಿದರೆ ಕೆಲ ವರ್ಷಗಳ ಬಳಿಕ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡಲಿವೆ. ಅಲ್ಲದೆ, ನಿವೇಶನ ರಹಿತರಿಗೆ 30×40 ಅಳತೆಯ ನಿವೇಶನ ನೀಡಲು ಆದೇಶಿಸಲಾಗಿದ್ದು, ಮನೆಯ ಮಹಿಳೆಯರ ಹೆಸರಿನಲ್ಲಿ ಜಂಟಿ ಖಾತೆ ಮಾಡಿಕೊಡಲಾಗುವುದು. ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇನೆ, ಜನರು ಕೂಲಿ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯೂರು ಕ್ಷೇತ್ರಕ್ಕೆ ಇನ್ನೂ ಎರಡು ಟಿಎಂಸಿ ಹೆಚ್ಚುವರಿ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಈ ಪ್ರಸ್ತಾವನೆಗೆ ಕೆಲವು ಜಿಲ್ಲೆಗಳ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತು ಶೀಘ್ರದಲ್ಲೇ ನೀರಾವರಿ ಸಲಹಾ ಸಮಿತಿ (ICC) ಸಭೆ ಕರೆದು, ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
#CMDKShivakumar #Hiriyur #UpperBhadraProject #ChitradurgaNews #GovindKarjol #PrajaSeva #KarnatakaPolitics #GuaranteeSchemes #Chaluvarayaswamy #UdayakalaNews

Related Posts

Leave a Reply

Your email address will not be published. Required fields are marked *