ಉದಯಕಾಲ ನ್ಯೂಸ್, ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಭಾರತದಿಂದ ಭಯೋತ್ಪಾದಕನೆಂದು ಗುರುತಿಸಲ್ಪಟ್ಟಿರುವ ಅಮೆರಿಕ ಮೂಲದ ಪ್ರತ್ಯೇಕತಾವಾದಿ ಪನ್ನುನ್ ಅವರನ್ನು ನ್ಯೂಯಾರ್ಕ್‌ನಲ್ಲಿ ಹತ್ಯೆ ಮಾಡಲು ರೂಪಿಸಿದ ಸಂಚಿನಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಭಾರತೀಯ ಪ್ರಜೆ 55 ವರ್ಷ ವಯಸ್ಸಿನ ನಿಖಿಲ್ ಗುಪ್ತಾ ಅವರಿಗೆ ಅಮೆರಿಕದ ಫೆಡರಲ್ ಕೋರ್ಟ್ 19 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಲ್ಲಿ ಪನ್ನುನ್ ಮತ್ತು ಕುಟುಂಬಸ್ಥರ ಕ್ಷಮೆಯಾಚಿಸಿದ ನಿಖಿಲ್ ಗುಪ್ತಾ
ಶಿಕ್ಷೆಯ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ ನಿಖಿಲ್ ಗುಪ್ತಾ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನಾನು ಪನ್ನುನ್ ಅವರ ಕ್ಷಮೆಯಾಚಿಸುತ್ತೇನೆ. ನಾನು ನೋವುಂಟು ಮಾಡಿದ ಸಮುದಾಯಗಳ ಕ್ಷಮೆ ಕೋರುತ್ತೇನೆ. ನನ್ನ ಕುಟುಂಬದವರಿಗೂ ನಾನು ಕ್ಷಮೆಯಾಚಿಸುತ್ತೇನೆ; ನಾನು ಅರ್ಹನಲ್ಲದಿದ್ದರೂ ಅವರು ನನ್ನನ್ನು ಪ್ರೀತಿಸುತ್ತಾ ಬಂದಿದ್ದಾರೆ ಎಂದು ಭಾವುಕರಾಗಿ ನುಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆಯೇ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಲಯದ ಈ ಮಹತ್ವದ ತೀರ್ಪಿನ ಪ್ರಕ್ರಿಯೆಯನ್ನು ಅವರ ಕುಟುಂಬಸ್ಥರು ಭಾರತದಿಂದಲೇ ಅಂತರ್ಜಾಲ ಸಂಪರ್ಕದ ಮೂಲಕ ಆಲಿಸಿದರು. 2026ರ ಫೆಬ್ರವರಿಯಲ್ಲಿ ಹಣ ನೀಡಿ ಕೊಲೆ ಮಾಡಲು ಸಂಚು ಹೂಡಿದ್ದು ಮತ್ತು ಅಕ್ರಮ ಹಣ ವರ್ಗಾವಣೆ ನಡೆಸಲು ಸಂಚು ರೂಪಿಸಿದ್ದನ್ನು ನ್ಯಾಯಾಲಯದ ಮುಂದೆ ಗುಪ್ತಾ ತಪ್ಪೊಪ್ಪಿಕೊಂಡಿದ್ದರು.
ವಿಕಾಸ್ ಯಾದವ್ ನಿರ್ದೇಶನದಲ್ಲಿ ಸಂಚು
ತೀರ್ಪಿನ ನಂತರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಹತ್ಯೆಯ ಸಂಚನ್ನು ವಿಕಾಸ್ ಯಾದವ್ ಎಂಬ ವ್ಯಕ್ತಿ ನಿರ್ದೇಶಿಸಿದ್ದಾನೆ ಎಂದು ತಿಳಿಸಿದೆ. ವಿಕಾಸ್ ಯಾದವ್ ಭಾರತದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನ ಉದ್ಯೋಗಿಯಾಗಿದ್ದು, ಇದೇ ಕಚೇರಿಯ ಅಡಿಯಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ (RAW) ಕಾರ್ಯನಿರ್ವಹಿಸುತ್ತದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಅಮೆರಿಕನ್ ಅಟಾರ್ನಿ ಜೇಮೀ ಮೆಕ್‌ಡೊನಾಲ್ಡ್, ಈ ಶಿಕ್ಷೆಯು, ಸಂಚು ರೂಪಿಸಿದ ಆರೋಪಿಗಳು ತಾವು ಅಮೆರಿಕದ ನ್ಯಾಯವ್ಯಾಪ್ತಿಯಿಂದ ಹೊರಗಿದ್ದೇವೆ ಎಂದು ಭಾವಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇಂದಿನ ಜೈಲು ಶಿಕ್ಷೆಯು ನಿಖಿಲ್ ಗುಪ್ತಾ ಅವರ ನಡವಳಿಕೆಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಇದೊಂದು ಸ್ಪಷ್ಟ ಎಚ್ಚರಿಕೆಯಾಗಬೇಕು. ಅಮೆರಿಕದ ನೆಲದಲ್ಲಿ ಅಥವಾ ಅಮೆರಿಕದ ನಾಗರಿಕರ ವಿರುದ್ಧ ಹಿಂಸಾಚಾರ ನಡೆಸಲು ಪ್ರಯತ್ನಿಸುವ ಯಾರನ್ನೇ ಆದರೂ ನ್ಯಾಯ ಇಲಾಖೆ ಮತ್ತು ಅದರ ಕಾನೂನು ಜಾರಿ ಪಾಲುದಾರರು ಪತ್ತೆಹಚ್ಚಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕಾನೂನಿನ ಮುಂದೆ ತರುತ್ತೇವೆ
ಮುಂದುವರಿದು ಮಾತನಾಡಿದ ಅಟಾರ್ನಿ ಜೇಮೀ ಮೆಕ್‌ಡೊನಾಲ್ಡ್, ಭಾರತದಲ್ಲಿದ್ದುಕೊಂಡು ಅಮೆರಿಕದ ನ್ಯಾಯಾಲಯಗಳ ವ್ಯಾಪ್ತಿಯಿಂದ ತಾನು ಹೊರಗಿದ್ದೇನೆ ಎಂದು ನಂಬಿದ್ದ ನಿಖಿಲ್ ಗುಪ್ತಾ, ಈ ಹತ್ಯೆಯ ಸಂಚು ರೂಪಿಸಲು ಸಹಾಯ ಮಾಡಿದ್ದನು. ಆದರೆ ಗುಪ್ತಾ ತಪ್ಪು ತಿಳಿದಿದ್ದನು. ಇಂದಿನ ತೀರ್ಪು, ಕ್ರೂರ ಮತ್ತು ಪೂರ್ವಯೋಜಿತ ಸಂಚಿಗೆ ಗುಪ್ತಾನನ್ನು ಹೊಣೆಗಾರನನ್ನಾಗಿ ಮಾಡುತ್ತದೆ. ಅಲ್ಲದೆ, ಇಂತಹ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಅವರನ್ನು ಕಾನೂನಿನ ಮುಂದೆ ತರುವ ನಮ್ಮ ಸಾಮರ್ಥ್ಯ, ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಈ ತೀರ್ಪು ತೋರಿಸುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆ
ಈ ಹತ್ಯೆ ಸಂಚು ಪ್ರಕರಣವು ಕಳೆದ ಮೂರು ವರ್ಷಗಳಿಂದ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತಿತ್ತು. ಅಮೆರಿಕವು ಈ ಕುರಿತು ಸಾಕ್ಷ್ಯಾಧಾರಗಳನ್ನು ಹಂಚಿಕೊಂಡ ಬೆನ್ನಲ್ಲೇ, ಭಾರತ ಸರ್ಕಾರವು ಈ ಕೃತ್ಯಕ್ಕೂ ಸರ್ಕಾರದ ನೀತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು ಮತ್ತು ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಇದೀಗ ಅಮೆರಿಕದ ನ್ಯಾಯಾಲಯವು ನಿಖಿಲ್ ಗುಪ್ತಾಗೆ 19 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸುವ ಮೂಲಕ ಈ ಪ್ರಕರಣದ ಪ್ರಮುಖ ಕಾನೂನು ಘಟ್ಟಕ್ಕೆ ತೆರೆ ಎಳೆದಿದೆ.
#NikhilGupta #GurpatwantSinghPannun #USFederalCourt #Khalistan #NewYork #USJusticeDepartment #IndiaUSRelations #InternationalNews #BreakingNews #UdayakalaNews


