Saturday, November 21, 2026
Menu

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಸ್ಪೆಂಡ್: ಮೆಟಾ ಕಚೇರಿ ಎದುರು ಕಾರ್ಯಕರ್ತರ ಪ್ರತಿಭಟನೆ!

ಉದಯಕಾಲ ನ್ಯೂಸ್, ಹೈದರಾಬಾದ್: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳನ್ನು ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಮೆಟಾ ಕಚೇರಿ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ನಡೆದ ಈ ಪ್ರತಿಭಟನೆಯ ವೇಳೆ ಕಾರ್ಯಕರ್ತರು ಕಚೇರಿ ಮುಂಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಎಸೆದು ಧ್ವಂಸಗೊಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ವಾಕ್ಸಮರಕ್ಕೆ ಕಾರಣವಾಗಿದೆ.

ಯಾವ ನಾಯಕರ ಖಾತೆಗಳಿಗೆ ನಿರ್ಬಂಧ

ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಮೆಟಾ ಸಂಸ್ಥೆ ಏಕಾಏಕಿ ನಿರ್ಬಂಧ ವಿಧಿಸಿದೆ ಎಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ನಡೆಯನ್ನು ವಿರೋಧಿಸಿ ತೆಲಂಗಾಣ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವಚರಣ್ ರೆಡ್ಡಿ ಅವರ ನೇತೃತ್ವದಲ್ಲಿ ಐವೈಸಿ (IYC) ಕಾರ್ಯಕರ್ತರು ಹೈದರಾಬಾದ್‌ನ ಮೆಟಾ ಕಚೇರಿ ಮುಂಭಾಗ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು. ಇದೇ ರೀತಿಯ ಪ್ರತಿಭಟನೆಗಳು ಮುಂಬೈ ಮತ್ತು ಗುರುಗ್ರಾಮದಲ್ಲೂ ನಡೆದಿವೆ ಎಂದು ಸಂಘಟನೆ ತಿಳಿಸಿದೆ.

ಮೆಟಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ

ಪ್ರತಿಭಟನೆಯ ವೇಳೆ ಭಿತ್ತಿಪತ್ರಗಳನ್ನು ಹಿಡಿದು ನೆಲದ ಮೇಲೆ ಕುಳಿತು ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಮೆಟಾ ಸಂಸ್ಥೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂ ರಾಜಕೀಯ ಬೆರೆಸಲಾಗುತ್ತಿದೆ ಹಾಗೂ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಹೂವಿನ ಕುಂಡಗಳ ಧ್ವಂಸ ಹಾಗೂ ಪೊಲೀಸರಿಂದ ವಶಕ್ಕೆ

ಪ್ರತಿಭಟನೆಯ ಕಾವು ತೀವ್ರಗೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕಚೇರಿ ಸಿಬ್ಬಂದಿ ತಡೆಯಲು ಪ್ರಯತ್ನಿಸಿದರೂ, ಕಾರ್ಯಕರ್ತರು ಕಚೇರಿ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಎಸೆದು ಧ್ವಂಸಗೊಳಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸೈಬರಾಬಾದ್ ಪೊಲೀಸರು ಕಾರ್ಯಕರ್ತರನ್ನು ಕಚೇರಿಯ ಒಳಗೆ ನುಗ್ಗದಂತೆ ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.

ಪ್ರತಿಭಟನಾಕಾರರು ಮೆಟಾ ಸಂಸ್ಥೆಗೆ ಏಳು ದಿನಗಳ (ಒಂದು ವಾರ) ಗಡುವು ನೀಡಿದ್ದು, ಮುಂದಿನ ಒಂದು ವಾರದ ಒಳಗಾಗಿ ಸಸ್ಪೆಂಡ್ ಮಾಡಲಾಗಿರುವ ನಮ್ಮ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಂಪೂರ್ಣವಾಗಿ ಸರಿಪಡಿಸಿ ಪುನಃಸ್ಥಾಪಿಸಬೇಕು ಮತ್ತು ಡಿಲೀಟ್ ಆಗಿರುವ ಪೋಸ್ಟ್‌ಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವುದರ ಜೊತೆಗೆ, ದೇಶಾದ್ಯಂತ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತೇವೆ ಮತ್ತು ಮೆಟಾ ಕಚೇರಿಗಳಿಗೂ ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ, ತಮ್ಮ ಪ್ರತಿಭಟನೆಯ ಬೆನ್ನಲ್ಲೇ 15 ನಿಮಿಷಗಳಲ್ಲಿ ಇಬ್ಬರು ನಾಯಕರ ಖಾತೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ತೆಲಂಗಾಣ ಯುವ ಕಾಂಗ್ರೆಸ್ ತನ್ನ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಹೇಳಿಕೊಂಡಿದೆ.

ಪ್ರತಿಭಟನೆ ಮತ್ತು ದಾಂಧಲೆಗೆ ಬಿಜೆಪಿ, ಬಿಆರ್‌ಎಸ್ ತೀವ್ರ ಖಂಡನೆ

ಮೆಟಾ ಕಚೇರಿ ಮೇಲಿನ ದಾಳಿ ಮತ್ತು ದಾಂಧಲೆಯನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಬಿಆರ್‌ಎಸ್ ತೀವ್ರವಾಗಿ ಖಂಡಿಸಿವೆ. ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳ ಮೇಲೆ ಗೂಂಡಾಗಿರಿ ನಡೆಸುವುದರಿಂದ ಹೂಡಿಕೆದಾರರಲ್ಲಿ ಭಯ ಉಂಟಾಗುತ್ತದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದು, ಇಂತಹ ವರ್ತನೆಯ ಬಳಿಕ ರಾಜ್ಯ ಸರ್ಕಾರ ಯಾವ ಮುಖ ಇಟ್ಟುಕೊಂಡು ಹೂಡಿಕೆದಾರರನ್ನು ಆಹ್ವಾನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಇತ್ತ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರೂ ಸಹ ಈ ಘಟನೆಯನ್ನು ಖಂಡಿಸಿದ್ದು, ಕೃತ್ಯವು ಹೂಡಿಕೆದಾರರ ನೆಚ್ಚಿನ ತಾಣವಾದ ಬ್ರ್ಯಾಂಡ್ ಹೈದರಾಬಾದ್ ನ ವಿಶ್ವಾಸಕ್ಕೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

#MetaOfficeProtest #HyderabadNews #YouthCongress #IYC #UdayBhanuChib #ManishSharma #SocialMediaSuspension #TelanganaPolitics #KTR #UdayakalaNews

Related Posts

Leave a Reply

Your email address will not be published. Required fields are marked *