Thursday, November 19, 2026
Menu

45 ಕೋಟಿ ರೂ. ಭೂ ಹಗರಣ: ತಹಶೀಲ್ದಾರ್ ವಿರುದ್ಧ ವಿಚಾರಣೆ, ನಾಲ್ವರು ಸಿಬ್ಬಂದಿ ವಿರುದ್ಧ ಕ್ರಮ

ಉದಯಕಾಲ ನ್ಯೂಸ್,ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭೂ ಹಗರಣದ ಗಂಭೀರ ಆರೋಪ ಬೆಳಕಿಗೆ ಬಂದಿದ್ದು, ತಾಲೂಕು ತಹಶೀಲ್ದಾರ್ ಮನೀಷಾ ಪತ್ರಿ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ನಾಲ್ವರು ಸಿಬ್ಬಂದಿ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಕಠಿಣ ಶಿಸ್ತು ಕ್ರಮ ಜರುಗಿಸಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಪುಲವಾರಪಲ್ಲಿ ಗ್ರಾಮದ ನಾಲ್ವರು ರೈತರಿಗೆ ಸೇರಿದ ಅಮೂಲ್ಯ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ವರ್ಗಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಬೆಳವಣಿಗೆಯು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನಕಲಿ ದಾಖಲೆ, ಕೆಐಎಡಿಬಿ ಪರಿಹಾರ ಕಬಳಿಸುವ ಸಂಚು

ಪುಲವಾರಪಲ್ಲಿ ಗ್ರಾಮದ ರೈತರಾದ ಕೆ.ವಿ. ಲಕ್ಷ್ಮಯ್ಯ, ಅಂಜನಪ್ಪ, ಅಕ್ಕಾಯಮ್ಮ ಹಾಗೂ ವೆಂಕಟರೆಡ್ಡಿ ಅವರಿಗೆ ಸೇರಿದ ಸುಮಾರು 15 ಎಕರೆ ಜಮೀನನ್ನು ಬಾಗೇಪಲ್ಲಿ ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಎಂಬುವವರ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಲಾಗಿತ್ತು. ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಜಮೀನು ಬರೋಬ್ಬರಿ 45 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ.

ನಕಲಿ ದಾಖಲೆಗಳು ಹಾಗೂ ವಂಶವೃಕ್ಷ ಸೃಷ್ಟಿಸಿ ಈ ಜಮೀನನ್ನು ಗ್ರಾಮ ಸಹಾಯಕಿ ಶಿವಮ್ಮ ಹೆಸರಿಗೆ ವರ್ಗಾಯಿಸಿದ ಬಳಿಕ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಕೋಟ್ಯಂತರ ರೂಪಾಯಿ ಪರಿಹಾರದ ಹಣವನ್ನು ಕಬಳಿಸುವ ಹುನ್ನಾರ ನಡೆದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಭೂಸ್ವಾಧೀನ ಪರಿಹಾರದ ದೊಡ್ಡ ಮೊತ್ತವನ್ನು ಗುರಿಯಾಗಿಸಿಕೊಂಡೇ ವ್ಯವಸ್ಥಿತವಾಗಿ ಈ ಖಾತೆ ಬದಲಾವಣೆ ನಡೆದಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಈ ಅಕ್ರಮದ ಕುರಿತು ದೂರುಗಳು ಹಾಗೂ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸಿದ್ದರು. ತನಿಖಾ ತಂಡ ಸಲ್ಲಿಸಿದ ಮಧ್ಯಂತರ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮದ ಚಾಟಿ ಬೀಸಿದೆ.

ವಜಾ, ಅಮಾನತು ಮತ್ತು ಇಲಾಖಾ ವಿಚಾರಣೆಗೆ ಶಿಫಾರಸು

ತನಿಖಾ ತಂಡದ ಮಧ್ಯಂತರ ವರದಿಯಂತೆ ಅಕ್ರಮ ಖಾತೆ ಬದಲಾವಣೆಗೆ ಸಹಕರಿಸಿದ ಆರೋಪದ ಮೇಲೆ ಗ್ರಾಮ ಸಹಾಯಕಿ ಶಿವಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಜತೆಗೆ ಕರ್ತವ್ಯ ಲೋಪ ಹಾಗೂ ಅಕ್ರಮದಲ್ಲಿ ಭಾಗಿಯಾದ ಶಂಕೆಯ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿಗಳಾದ ಮಂಜುಳಾ ಬಾಳವ್ವಗೋಡ ಹಾಗೂ ಮಂಜುನಾಥ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಮತ್ತೊಂದೆಡೆ, ಈ ಇಡೀ ಪ್ರಕರಣದ ಕೇಂದ್ರಬಿಂದುವಾಗಿರುವ ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಪತ್ರಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದಾರೆ. ಹಿರಿಯ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿರುವುದು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದೆ.

‘ಆಟೋ ಮ್ಯುಟೇಷನ್’ ಸ್ಪಷ್ಟನೆ ಹಾಗೂ ಕಾಡುವ ಪ್ರಶ್ನೆಗಳು

ಭೂ ಅಕ್ರಮದ ವಿಚಾರ ಸಾರ್ವಜನಿಕವಾಗಿ ಬಯಲಾಗುತ್ತಿದ್ದಂತೆಯೇ ಕಂದಾಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಮತ್ತೆ ಮೂಲ ರೈತರ ಹೆಸರಿಗೆ ಪೌತಿ ಖಾತೆಯನ್ನು ಬದಲಾಯಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಮನೀಷಾ ಪತ್ರಿ, ಪೌತಿ ಖಾತೆ ಪ್ರಕ್ರಿಯೆಯಲ್ಲಿ ಕಣ್ತಪ್ಪಿನಿಂದ ಖಾತೆ ಬದಲಾವಣೆಯಾಗಿದ್ದು, ತಾಂತ್ರಿಕವಾಗಿ ಆಟೋ ಮ್ಯುಟೇಷನ್ ಮೂಲಕ ಇದು ನಡೆದಿದೆಯೇ ಹೊರತು ಯಾವುದೇ ಉದ್ದೇಶಪೂರ್ವಕ ಅಕ್ರಮ ಅಥವಾ ದುರುದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಸಾರ್ವಜನಿಕವಾಗಿ ಪ್ರಕರಣ ಬಹಿರಂಗವಾದ ತಕ್ಷಣ ಮೂಲ ರೈತರ ಹೆಸರಿಗೆ ಖಾತೆ ಮರುಬದಲಾಯಿಸಿರುವುದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವೇ ಎಂಬ ಅನುಮಾನ ಮೂಡಿಸಿದೆ. 45 ಕೋಟಿ ರೂ. ಮೌಲ್ಯದ 15 ಎಕರೆ ಜಮೀನಿನ ಖಾತೆ ಗ್ರಾಮ ಸಹಾಯಕಿಯ ಹೆಸರಿಗೆ ಹೇಗೆ ಬದಲಾಯಿತು, ನಕಲಿ ದಾಖಲೆ ಮತ್ತು ವಂಶವೃಕ್ಷ ಸೃಷ್ಟಿಸಿದ ಕಿಂಗ್‌ಪಿನ್‌ಗಳು ಯಾರು, ಹಂತ-ಹಂತದ ಕಂದಾಯ ಪರಿಶೀಲನೆಯಲ್ಲಿ ಇದು ಹೇಗೆ ಕಣ್ತಪ್ಪಿತು ಹಾಗೂ ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬ ಪ್ರಶ್ನೆಗಳಿಗೆ ಸಮಗ್ರ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪುಲವಾರಪಲ್ಲಿ ಸೇರಿದಂತೆ ಸುತ್ತಮುತ್ತಲ ರೈತರು ಆಗ್ರಹಿಸಿದ್ದಾರೆ.

KIADB #ತಹಶೀಲ್ದಾರ್ #ಉದಯಕಾಲ #Bagepalli #Chikkaballapur #LandScam #KarnatakaNews

Related Posts

Leave a Reply

Your email address will not be published. Required fields are marked *