Tuesday, November 17, 2026
Menu

ಕಾನೂನು ಸಚಿವರ ಮನೆಯಲ್ಲೇ ಕಳ್ಳತನ: 90 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳವು

ಉದಯಕಾಲ ನ್ಯೂಸ್, ಪಾಟ್ನಾ: ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಟ್ಟಿರುವುದಕ್ಕೆ ಈ ಘಟನೆ ತಾಜಾ ಉದಾಹರಣೆ. ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಸ್ವತಃ ರಾಜ್ಯದ ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಸಂಜಯ್ ಸಿಂಗ್ ‘ಟೈಗರ್’ ಅವರ ಅಧಿಕೃತ ನಿವಾಸಕ್ಕೇ ಕಳ್ಳರು ನುಗ್ಗಿದ್ದು, ಸುಮಾರು 90 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ. ಸಚಿವರ ಮನೆಯಲ್ಲೇ ಕೋಟ್ಯಂತರ ರೂ. ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದು ಆಡಳಿತ ಪಕ್ಷಕ್ಕೆ ಮುಜುಗರ ತಂದಿದೆ.

ಛತ್ ಪೂಜೆ ವೇಳೆ ಒಂಟಿಯಾಗಿದ್ದ ಮನೆಗೆ ಖದೀಮರ ಕೈಚಳಕ

ಸಚಿವ ಸಂಜಯ್ ಸಿಂಗ್ ಅವರು ಅವಿವಾಹಿತರಾಗಿದ್ದು, ಅವರ ಸಹೋದರರು ತಮ್ಮ ಕುಟುಂಬದೊಂದಿಗೆ ಈ ಮನೆಯಲ್ಲೇ ವಾಸಿಸುತ್ತಿದ್ದಾರೆ. ಘಟನೆ ನಡೆದ ಸಮಯದಲ್ಲಿ ಸಚಿವರು ಹಾಗೂ ಅವರ ಕುಟುಂಬದ ಸದಸ್ಯರು ಯಾರೂ ಮನೆಯಲ್ಲಿರಲಿಲ್ಲ. ಬಿಹಾರದ ಮಹತ್ವದ ಹಬ್ಬವಾದ ‘ಛತ್ ಪೂಜೆ’ಯ ಹಿನ್ನೆಲೆಯಲ್ಲಿ ಇಡೀ ಕುಟುಂಬವು ಭೋಜ್‌ಪುರ ಜಿಲ್ಲೆಯ ಅಮ್ರೈ ನವಾಡದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ತೆರಳಿತ್ತು. ಕುಟುಂಬದವರು ಮನೆಯ ಕೀಲಿಯನ್ನು ನೆರೆಯವರೊಬ್ಬರಿಗೆ ನೀಡಿ, ರಾತ್ರಿ ವೇಳೆ ಬಂದು ನೋಡಿಕೊಳ್ಳುವಂತೆ ಕೋರಿದ್ದರು. ಆದರೆ, ಈ ಒಂಟಿತನದ ಅವಕಾಶವನ್ನು ಬಳಸಿಕೊಂಡ ದುಷ್ಕರ್ಮಿಗಳು ಕೃತ್ಯವೆ ಎಗಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ನಸುಕಿನ ಜಾವ ಸುಮಾರು ಏಳು ಮಂದಿಯ ದುಷ್ಕರ್ಮಿಗಳ ಗುಂಪು ಎರಡು ಸ್ಕೂಟರ್‌ ಹಾಗೂ ಒಂದು ಮೋಟಾರ್‌ಸೈಕಲ್‌ನಲ್ಲಿ ಪಾಟ್ನಾದ ಶಾಸ್ತ್ರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ‘ಎಜಿ ಕಾಲೋನಿ’ಯಲ್ಲಿರುವ ಸಚಿವರ ಎರಡು ಅಂತಸ್ತಿನ ಮನೆಗೆ ಆಗಮಿಸಿದೆ. ಮನೆಯ ಆವರಣ ಗೋಡೆಯನ್ನು ಹಾರಿ ಒಳಗೆ ನುಗ್ಗಿದ ಖದೀಮರು, ಮನೆಯ ಎಂಟು ಕೊಠಡಿಗಳ ಬೀಗಗಳನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲಾವಧಿಯಲ್ಲಿ ಮನೆಯ ಮೂಲೆಮೂಲೆ ಜಾಲಾಡಿರುವ ದುಷ್ಕರ್ಮಿಗಳು, ಸುಮಾರು 600 ಗ್ರಾಂ ಚಿನ್ನದ ಆಭರಣಗಳು, 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ 7 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 90 ಲಕ್ಷ ರೂ. ಮೌಲ್ಯದ ಸಂಪತ್ತನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಮೂವರು ಶಂಕಿತರ ಬಂಧನ: ತೀವ್ರ ತನಿಖೆ

ರಾಜ್ಯದ ಕಾನೂನು ಸಚಿವರ ನಿವಾಸದಲ್ಲೇ ನಡೆದ ಈ ಭಾರಿ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಾಟ್ನಾ ಪೊಲೀಸರು, ವಿಶೇಷ ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ (FSL) ತಂಡವನ್ನು ಕರೆಸಿ ಮಹತ್ವದ ಬೆರಳಚ್ಚು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸಚಿವರ ಮನೆ ಇರುವ ಸುತ್ತಮುತ್ತಲಿನ ಪ್ರದೇಶ ಹಾಗೂ ರಸ್ತೆಗಳಲ್ಲಿರುವ ಖಾಸಗಿ ಮತ್ತು ಸಾರ್ವಜನಿಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಸೆಕ್ರೆಟರಿಯೇಟ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸಾಕೆತ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಚಿವರ ಕುಟುಂಬದವರು ಛತ್ ಪೂಜೆಗಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲೇ ಈ ಕಳ್ಳತನ ನಡೆದಿದೆ ಎಂದು ಖಚಿತಪಡಿಸಿದ್ದಾರೆ. ಈ ಪ್ರತಿಷ್ಠಿತ ಪ್ರದೇಶದಲ್ಲಿ ನಡೆದ ಕಳ್ಳತನವು ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದ್ದು, ಸಚಿವರ ಕಡೆಯಿಂದ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆಯು ಪ್ರಕರಣವನ್ನು ಭೇದಿಸಲು ಹಲವು ವಿಶೇಷ ತಂಡಗಳನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.
#BiharNews #LawMinisterHouseTheft #PatnaNews #SanjaySinghTiger #ChhathPooja #UdayakalaNews #CrimeNewsBihar

Related Posts

Leave a Reply

Your email address will not be published. Required fields are marked *