ಉದಯಕಾಲ ನ್ಯೂಸ್, ಶಿವಮೊಗ್ಗ: ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ಬಿಜೆಪಿ ನಾಯಕರಾದ ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೈಲು ವಾಸದ ಕುರಿತು ಬಹಿರಂಗವಾಗಿ ಮಾತನಾಡುವಂತೆ ಸವಾಲು ಹಾಕಿರುವ ಅವರು, ಮಾಜಿ ಶಾಸಕ ಹಾಲಪ್ಪ ಹರತಾಳು ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಇಲಾಖೆಯ ಮುಂದಿನ ಯೋಜನೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ವಿವರಣೆ ನೀಡಿದ್ದಾರೆ.
ನನ್ನ ಪ್ರಶ್ನೆಗೆ ಉತ್ತರಿಸಲಿ: ಧು ಬಂಗಾರಪ್ಪ
ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿದ್ದ ಸಚಿವ ಮಧು ಬಂಗಾರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರ ಅವರಿಗೆ ತಾಕತ್ ಇದ್ದರೆ, ಯಡಿಯೂರಪ್ಪ ಅವರು ಏಕೆ ಜೈಲಿಗೆ ಹೋಗಿದ್ದರು ಎಂಬುದನ್ನು ಜನರ ಮುಂದೆ ಬಂದು ಹೇಳಲಿ ಎಂದು ಸವಾಲು ಹಾಕಿದರು. ಚುನಾವಣೆ ಬಂದರೆ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದು ಬಿಜೆಪಿಗೆ ರೂಢಿಯಾಗಿದೆ ಎಂದ ಅವರು, ತಾವು ಅಥವಾ ತಮ್ಮ ಕುಟುಂಬದವರು ಎಂದಿಗೂ ರಾಜಕೀಯ ಪ್ರತಿಕಾಕಾರಕ್ಕಾಗಿ ವಿರೋಧಿಗಳನ್ನು ಅಥವಾ ಬೆಂಬಲಿಗರನ್ನು ಜೈಲಿಗೆ ಕಳುಹಿಸುವ ಕೀಳು ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಜಿ ಸಚಿವ ಹಾಲಪ್ಪ ಹರತಾಳು ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಹಾಲಪ್ಪ ಹರತಾಳು ಅವರು ಹಿಂದೆ ತಮ್ಮ ಮನೆಗೆ ನೆಲ ಒರೆಸಲು ಬರುತ್ತಿದ್ದವರು ಎಂದು ವ್ಯಂಗ್ಯವಾಡಿದರು. ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಉಲ್ಲೇಖಿಸುವ ಯೋಗ್ಯತೆಯೂ ಇಲ್ಲ ಎಂದ ಅವರು, ಹಾಲಪ್ಪ ಅವರು ‘ಟೂರಿಂಗ್ ಟಾಕೀಸ್’ ಇದ್ದ ಹಾಗೆ, ಅವರನ್ನು ನಂಬಿಕೊಂಡು ಸಂಸದರು ಹೋಗಿರುವುದು ಕೇವಲ ತಮಾಷೆಯಾಗಿದೆ ಎಂದು ಟೀಕಿಸಿದರು. ಆನವಟ್ಟಿ ಹೋಬಳಿಯ ತೇವರಕೊಪ್ಪ ಗ್ರಾಮದಲ್ಲಿ ರೈತ ದೇವರಾಜನವರ ಅಡಿಕೆ ತೋಟವನ್ನು ನಾಶ ಮಾಡಿರುವ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಆರೋಪಿಸಿದರು. ವಿಜಯೇಂದ್ರ ಅವರು ಸದನದಲ್ಲಿ ಶಿಕಾರಿಪುರದಲ್ಲಿ ಬಂದು ರಾಜಕೀಯ ಮಾಡುತ್ತೇನೆ ಎಂದು ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ಖಾಸಗೀಕರಣಕ್ಕೆ ವಿರೋಧ
ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಮಾತನಾಡಿದ ಮಧು ಬಂಗಾರಪ್ಪ, ಈ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ತಿಳಿಸಿದರು. ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದ ಅವರು, ವಿಮಾನ ನಿಲ್ದಾಣದ ಇನ್ಫ್ರಾಸ್ಟ್ರಕ್ಚರ್ ಅನ್ನು ಬೇರೆ ಬಳಕೆಗೂ ಮುಕ್ತವಾಗಿಡಲು ಹಾಗೂ ಅಲ್ಲಿ ವಿಮಾನ ತರಬೇತಿ ಕೇಂದ್ರವನ್ನು ಆರಂಭಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜನಪರ ಸೇವೆಯನ್ನು ಸ್ಮರಿಸಿದ ಅವರು, ಬಂಗಾರಪ್ಪನವರು ಅಧಿಕಾರದಲ್ಲಿದ್ದಾಗ ಮೆಗ್ಗಾನ್ ಆಸ್ಪತ್ರೆ ನಿರ್ಮಾಣ, ತುಂಗಾ ಡ್ಯಾಂ ಮೂಲಕ ಕುಡಿಯುವ ನೀರು ಒದಗಿಸುವಂತಹ ಮಹತ್ವದ ಜನಪರ ಕೆಲಸಗಳನ್ನು ಮಾಡಿದ್ದಾರೆ. ಆದರೆ ಬಿಜೆಪಿಯವರು ವಿಮಾನ ನಿಲ್ದಾಣ ಕಟ್ಟಿ ಅದರ ಮೇಲೆ ಕಮಲದ ಗುರುತು ಇಟ್ಟುಕೊಂಡರು ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಶೀಘ್ರ ಶಿಕ್ಷಕರ ನೇಮಕಾತಿ ಸಿಇಟಿ ದಿನಾಂಕ ಹಾಗೂ ಶರಾವತಿ ಸಂತ್ರಸ್ತರಿಗೆ ಪರಿಹಾರ
ಶಿಕ್ಷಣ ಇಲಾಖೆಯ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದ ಸಚಿವರು, ಶಿಕ್ಷಕರ ನೇಮಕಾತಿಗಾಗಿ ನಡೆಸಲಿರುವ ಸಿಇಟಿ ಪರೀಕ್ಷೆಯ ದಿನಾಂಕವನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದರು. ಅಲ್ಲದೆ, ಮುಂದಿನ ಜೂನ್ ತಿಂಗಳಿಂದ ಕೆಪಿಎಸ್ (KPS) ಶಾಲೆಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಇಲಾಖೆಯ ವ್ಯಾಪ್ತಿಯಲ್ಲಿ 13 ಲಕ್ಷ ಮಕ್ಕಳಿದ್ದು, ಈ ಸೌಲಭ್ಯದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜೊತೆಗೆ, ಶರಾವತಿ ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಈ ಪ್ರಕ್ರಿಯೆಗೆ ತೊಡಕುಂಟಾಗಿ ಸುಪ್ರೀಂಕೋರ್ಟ್ವರೆಗೆ ಪ್ರಕರಣ ಹೋಗಿತ್ತು. ಈಗ ಆ ಕಾನೂನು ತೊಡಕುಗಳನ್ನು ಸರಿಪಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹಲವು ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
#MadhuBangarappa #Yedyiyurappa #ShivamoggaNews #CongressVsBJP #HalappaHaratalu #KarnatakaPolitics #UdayakalaNews

