Tuesday, November 17, 2026
Menu

ಕಾಡಾನೆಯಿಂದ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವ್‌ – ಬೋನಿನಿಂದ ಚಿರತೆ ಎಸ್ಕೇಪ್!

ಚಾಮರಾಜನಗರ/ಮೈಸೂರು: ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಾದ ಬಂಡೀಪುರ ಹಾಗೂ ಮೈಸೂರು ಭಾಗದಲ್ಲಿ ವನ್ಯಜೀವಿಗಳ ಹಾವಳಿ ಹಾಗೂ ರೋಚಕ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ. ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆದ್ದಾರಿಯಲ್ಲಿ ಒಂಟಿ ಕಾಡಾನೆ ದಾಳಿಯಿಂದ ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರೊಂದಿಗೆ ಮತ್ತೊಂದೆಡೆ ಮೈಸೂರು ತಾಲೂಕಿನಲ್ಲಿ ಸೆರೆಯಾದ ಚಿರತೆಯೊಂದು ಅರಣ್ಯ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ ಪರಾರಿಯಾಗಿರುವ ಆತಂಕಕಾರಿ ಘಟನೆಯೂ ನಡೆದಿದೆ.ಪ್ರವಾಸಿಗರ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಬೇಜವಾಬ್ದಾರಿ ವರ್ತನೆಯಿಂದ ವನ್ಯಜೀವಿಗಳ ಉಪದ್ರವಕ್ಕೆ ಜನರು ಗುರಿಯಾಗುತ್ತಿರುವುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.

ಹೆದ್ದಾರಿಯಲ್ಲಿ ಕಾಡಾನೆ ಆರ್ಭಟ – ಬೈಕ್ ಸವಾರ ಜಸ್ಟ್ ಮಿಸ್

ಮೂರು ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ರಾಷ್ಟ್ರೀಯ ಹೆದ್ದಾರಿ-766ರ ಮೂಲಹೊಳೆ ವಲಯ ವ್ಯಾಪ್ತಿಯಲ್ಲಿ ಈ ರೋಚಕ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಒಂಟಿ ಕಾಡಾನೆಯೊಂದು ನಿಂತು ಮೇಯುತ್ತಿತ್ತು. ಆನೆಯನ್ನು ನೋಡಲು ಹಾಗೂ ಮುಂದೆ ತೆರಳಲು ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಅಜಾಗರೂಕ ಕಾರಿನ ಚಾಲಕ ಜೋರಾಗಿ ಹಾರ್ನ್ ಮಾಡಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಒಂಟಿ ಆನೆ ಏಕಾಏಕಿ ರಸ್ತೆಯಲ್ಲಿದ್ದ ವಾಹನಗಳತ್ತ ಆಕ್ರೋಶದಿಂದ ನುಗ್ಗಿ ಬಂದಿದೆ. ಅದೇ ವೇಳೆ ಸಮೀಪದಲ್ಲೇ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನೊಬ್ಬ ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಆನೆಯು ಸವಾರನ ತೀರಾ ಹತ್ತಿರದವರೆಗೆ ಬಂದರೂ ಅದೃಷ್ಟವಶಾತ್ ಏನೂ ಮಾಡದೆ ವಾಪಸ್ ಕಾಡಿನೊಳಗೆ ಓಡಿಹೋಗಿದೆ. ಜೀವಭಯದಿಂದ ನಡುಗಿದ ಸವಾರ ಎದ್ದೂ ಬಿದ್ದು ಬೈಕ್ ಸ್ಟಾರ್ಟ್ ಮಾಡಿಕೊಂಡು ಕೇರಳದತ್ತ ಪ್ರಯಾಣ ಬೆಳೆಸಿದ್ದಾನೆ. ಸದ್ಯ ಈ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಅರಣ್ಯ ಪ್ರದೇಶದ ಸೂಕ್ಷ್ಮ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಪ್ರಾಣಿಗಳನ್ನು ಕಂಡಾಗ ವಾಹನ ನಿಲ್ಲಿಸುವುದು ಮತ್ತು ಬೇಜವಾಬ್ದಾರಿಯಿಂದ ಹಾರ್ನ್ ಮಾಡುವುದು ಮುಂತಾದ ಕೃತ್ಯಗಳನ್ನು ಎಸಗುತ್ತಿರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದು ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಸೋಮವಾರ ಮಧ್ಯಾಹ್ನ ಬಂಡೀಪುರ ಕಾಡಿನೊಳಗೆ ಅಕ್ರಮವಾಗಿ ಕಾರಿನಲ್ಲಿ ಪ್ರವೇಶಿಸಿರುವ ಘಟನೆಯೂ ನಡೆದಿದ್ದು, ಸಾರ್ವಜನಿಕರು ಸೆರೆಹಿಡಿದಿರುವ ಕಾರಿನ ಫೋಟೋ ಹಾಗೂ ನಂಬರ್ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಬೋನಿಗೆ ಬಿದ್ದ ಚಿರತೆ ಸಿಬ್ಬಂದಿ ಮೇಲೆಯೇ ದಾಳಿ ಮಾಡಿ ಪರಾರಿ

ಬಂಡೀಪುರ ಆನೆ ದಾಳಿಯ ಸುದ್ದಿಯ ಬೆನ್ನಲ್ಲೇ, ಮೈಸೂರು ತಾಲೂಕಿನ ಮರಸೆ ಗ್ರಾಮದಲ್ಲಿ ಮತ್ತೊಂದು ಆತಂಕಕಾರಿ ಘಟನೆ ವರದಿಯಾಗಿದೆ. ಮರಸೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ದಿನೇ ದಿನೇ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಇಲಾಖೆ ಸಿಬ್ಬಂದಿ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬೋನು ಇಟ್ಟಿದ್ದರು. ಅದರಂತೆ ಸೋಮವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಚಿರತೆಯೊಂದು ಬೋನಿಗೆ ಬಿದ್ದಿತ್ತು.

ಸೆರೆಯಾದ ಚಿರತೆಯನ್ನು ಬೋನು ಸಮೇತ ಸುರಕ್ಷಿತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 9 ಗಂಟೆಗೆ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಬೋನಿನೊಳಗೆ ಸಿಕ್ಕಿಹಾಕಿಕೊಂಡಿದ್ದ ಉಗ್ರ ಚಿರತೆ ತೀವ್ರವಾಗಿ ಆರ್ಭಟಿಸಿದ್ದು, ಏಕಾಏಕಿ ಬೋನಿನ ಬಾಗಿಲಿಗೆ ಬಲವಾಗಿ ಗುದ್ದಿದೆ. ಬಾಗಿಲು ಮುಚ್ಚಿ ಸುರಕ್ಷಿತಗೊಳಿಸಲು ಮುಂದಾದ ಅರಣ್ಯ ಸಿಬ್ಬಂದಿ ಯೋಗೇಶ್ ಎಂಬುವವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಪರಚಿದೆ. ಕ್ಷಣಾರ್ಧದಲ್ಲಿ ನಡೆದ ಈ ಅನಿರೀಕ್ಷಿತ ದಾಳಿಯ ಲಾಭ ಪಡೆದ ಚಿರತೆ ಬೋನಿನಿಂದ ಹೊರಬಿದ್ದು ಕಾಡಿನ ಕಡೆಗೆ ಪರಾರಿಯಾಗಿದೆ.

ಚಿರತೆ ದಾಳಿಯಿಂದ ಗಾಯಗೊಂಡಿರುವ ಅರಣ್ಯ ಸಿಬ್ಬಂದಿ ಯೋಗೇಶ್ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಎಫ್‌ಒ ಜಿಸನ್ ಅವರು, ಚಿರತೆ ಸೆರೆಗೆ 20 ಮಂದಿಯ ತಂಡ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಒಂದೆಡೆ ಕಾಡಾನೆಗಳ ಅಬ್ಬರ ಮತ್ತೊಂದೆಡೆ ಚಿರತೆಗಳ ಪ್ರತ್ಯಕ್ಷ ದರ್ಶನದಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ.
#BandipurElephantAttack #MysoreLeopard #WildAnimalAttack #GundlupetHighway #KarnatakaForest #WildlifeSafety #UdayakalaNews #ViralVideo

Related Posts

Leave a Reply

Your email address will not be published. Required fields are marked *