Menu

ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಜೀವ ದಹನ, 16 ಮಂದಿಗೆ ಗಾಯ

ಫುಕೆಟ್‌: ಥಾಯ್ಲೆಂಡ್‌ನ ದಕ್ಷಿಣ ಭಾಗದ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಫುಕೆಟ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಸೋಮವಾರ ಮುಂಜಾನೆ ಸಂಭವಿಸಿದ ಈ ದುರ್ಘಟನೆಯು ಸ್ಥಳೀಯವಾಗಿ ಭಾರೀ ಆಘಾತವನ್ನುಂಟುಮಾಡಿದೆ. ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ವಾಣಿಜ್ಯ ಕಟ್ಟಡದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ, ಮುಂಜಾನೆಯ ನಿದ್ರೆಯಲ್ಲಿದ್ದವರ ಜೀವವನ್ನು ಬಲಿ ತೆಗೆದುಕೊಂಡಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ವಾಹನ ಬಾಡಿಗೆ ಕಟ್ಟಡದಲ್ಲಿ ಬೆಂಕಿಯ ಕೆನ್ನಾಲಿಗೆ 

ಸೋಮವಾರ ಮುಂಜಾನೆ ಸುಮಾರು 3:17ರ ಸುಮಾರಿಗೆ ಫುಕೆಟ್‌ನ ಪಟಾಂಗ್ ಪ್ರದೇಶದ ಸಮೀಪವಿರುವ ಫಾಂಗ್ ಮುವಾಂಗ್ ಸೈ ಕೊ ರಸ್ತೆ ಬಳಿಯ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ವಾಹನ ಬಾಡಿಗೆ ವ್ಯವಹಾರ ನಡೆಸಲಾಗುತ್ತಿದ್ದು, ನೆಲ ಮಹಡಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮೋಟಾರ್ ಸೈಕಲ್‌ಗಳು, ರಬ್ಬರ್ ಟೈರ್‌ಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ಇಂಧನ ಶೇಖರಿಸಿಡಲಾಗಿತ್ತು.

ಮಳೆಗಾಲದ ವಾತಾವರಣದ ನಡುವೆ ಕಟ್ಟಡದ ಮುಂದಿನ ವಿದ್ಯುತ್ ಕಂಬದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಇಂಧನ ಹಾಗೂ ಪ್ಲಾಸ್ಟಿಕ್ ಸಾಮಗ್ರಿಗಳು ಇದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಮುಗಿಬಿದ್ದು, ಕಟ್ಟಡದ ಮೇಲಿನ ಅಂತಸ್ತಿನತ್ತ ವೇಗವಾಗಿ ವ್ಯಾಪಿಸಿದೆ. ಅಷ್ಟೇ ಅಲ್ಲದೆ, ಪಕ್ಕದಲ್ಲಿದ್ದ ಇತರ ನಾಲ್ಕೈದು ಕಟ್ಟಡಗಳಿಗೂ ಬೆಂಕಿ ಆವರಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 6 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಸತತ ಎರಡು ಗಂಟೆಗಳ ಕಾಲ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಉಸಿರುಗಟ್ಟಿ 11 ಮಂದಿ ಸಾವು: ಪ್ರವಾಸಿಗರಿಗೆ ಸುರಕ್ಷಿತೆ

ಈ ಭೀಕರ ಅಗ್ನಿ ಅವಘಡದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 8 ಜನ ಮಹಿಳೆಯರು ಹಾಗೂ 3 ಜನ ಪುರುಷರು ಸೇರಿದ್ದಾರೆ. ಕಟ್ಟಡದ 3ನೇ ಮಹಡಿಯಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದ್ದರೆ, ಉಳಿದ 10 ಮಂದಿಯ ಮೃತದೇಹಗಳು 5ನೇ ಮಹಡಿಯ ಕೊಠಡಿಗಳಲ್ಲಿ ಹಾಗೂ ಮೆಟ್ಟಿಲುಗಳ ಬಳಿ ಪತ್ತೆಯಾಗಿವೆ. ಮೃತರನ್ನು ಹೆಚ್ಚಾಗಿ ದಟ್ಟವಾದ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 16 ಜನರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ 15 ಮಂದಿ ಥಾಯ್ಲೆಂಡ್ ಸ್ಥಳೀಯ ಪ್ರಜೆಗಳಾಗಿದ್ದರೆ, ಓರ್ವ ಮ್ಯಾನ್ಮಾರ್ ದೇಶದ ಕಾರ್ಮಿಕರಾಗಿದ್ದಾರೆ. ವಿಶೇಷವೆಂದರೆ, ಈ ದುರ್ಘಟನೆಯಲ್ಲಿ ಯಾವುದೇ ವಿದೇಶಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿಯವರು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.
#Thailand #PhuketFire #Accident #WorldNews #ThailandNews #BreakingNews #Udayakala

Related Posts

Leave a Reply

Your email address will not be published. Required fields are marked *