Saturday, November 14, 2026
Menu

ಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟಿನ ನಂತರ ತಮಿಳುನಾಡಿಗೂ ನೀರು ಹರಿಯಲಿದೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟು ಯೋಜನೆಯು ನಮ್ಮ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಹಕ್ಕಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನ ರಾಜಕೀಯ ನಾಯಕರಿಂದ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತಮಿಳುನಾಡಿನವರು ಸುಮ್ಮನೆ ವಿರೋಧ ವ್ಯಕ್ತಪಡಿಸುವ ಬದಲು ಒಂದು ನಿಯೋಗದೊಂದಿಗೆ ನೇರವಾಗಿ ಸ್ಥಳಕ್ಕೆ ಬರಲಿ, ಯೋಜನೆಯಿಂದ ಅವರಿಗೂ ಆಗುವ ಅನುಕೂಲಗಳೇನು ಎಂಬುದನ್ನು ಖುಲ್ಲಂ ಖುಲ್ಲಾ ತೋರಿಸಿ ವಿವರಿಸಲು ತಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.

ಕಾವೇರಿ ನ್ಯಾಯ ಮಂಡಳಿ ಆದೇಶದಂತೆ ತಮಿಳುನಾಡಿನ ಹಿತಕ್ಕೂ ಬದ್ಧ:  ಸಿಎಂ ಭರವಸೆ

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ತೆರೆಎಳೆದ ಡಿಕೆಶಿ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿಯ ಆದೇಶದಂತೆ ತಮಿಳುನಾಡಿಗೆ ದೊರಕಬೇಕಾದ 177 ಟಿಎಂಸಿ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ತಮಿಳುನಾಡಿನ ಹಕ್ಕನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ, ಅದೇ ರೀತಿಯಲ್ಲಿ ನಮ್ಮ ರಾಜ್ಯದ ಹಕ್ಕುಗಳ ರಕ್ಷಣೆಗೆ ಕಟ್ಟುಬಿದ್ದಿದ್ದೇವೆ. ಅಣೆಕಟ್ಟು ನಿರ್ಮಿಸಿ ತಮಿಳುನಾಡಿಗೆ ಸಿಗಬೇಕಾದ ನೀರಿನ ಪಾಲನ್ನು ಯಾವುದೇ ತೊಂದರೆಯಿಲ್ಲದೆ ಬಿಡುತ್ತೇವೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಕಾರಣಗಳಿಗಾಗಿ ಡಿಎಂಕೆ, ಎಐಎಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ವಿರೋಧ ಮಾಡುತ್ತಿದ್ದಾರೆ ವಿನಃ, ಇದು ಯಾವುದೇ ರಾಜಕೀಯ ವಿಷಯವಲ್ಲ. ದೇಶದ ಕಾನೂನು ಹಾಗೂ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು ಎಂದರು.

ಬೆಂಗಳೂರು ಮೆಟ್ರೋ, ಡಬಲ್ ಡೆಕ್ಕರ್ ಫ್ಲೈಓವರ್ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಭೆಯ ವಿವರಗಳನ್ನು ಹಂಚಿಕೊಂಡ ಡಿಕೆಶಿ, ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ಶೀಘ್ರವಾಗಿ ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿರುವುದಾಗಿ ತಿಳಿಸಿದರು. ರಾಜಕಾರಣದಲ್ಲಿ ಸ್ಪರ್ಧೆ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ಇದೇ ವೇಳೆ ಬೆಂಗಳೂರಿನ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಅವರು, ಕಸ್ತೂರಿರಂಗನ್ ವರದಿ ತಿರಸ್ಕರಿಸುವಂತೆ, ಮೆಟ್ರೋ ವಿಸ್ತರಣೆಗೆ ಕೇಂದ್ರದ ಸಮಾನ ಪಾಲುದಾರಿಕೆ ಕೋರಿರುವುದಾಗಿ ಹೇಳಿದರು. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ. 8ರಷ್ಟಿದ್ದು, ಭೂಸ್ವಾಧೀನ ವೆಚ್ಚ ಅತ್ಯಂತ ಹೆಚ್ಚಿರುವ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ‘ಡಬಲ್ ಡೆಕ್ಕರ್ ಫ್ಲೈಓವರ್’ ಯೋಜನೆ ಜಾರಿಗೊಳಿಸಬೇಕಿದೆ. ಈ ಕುರಿತು ಪ್ರಧಾನಿಯವರ ಬಳಿ ಚರ್ಚಿಸಿದ್ದು, ಶೀಘ್ರವೇ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ಅಲ್ಲದೆ, ಬರಗಾಲದ ಹಿನ್ನೆಲೆಯಲ್ಲಿ ಏತ ನೀರಾವರಿ ಹಾಗೂ ಪಂಪ್‌ಸೆಟ್‌ಗಳ ಬಳಕೆಯಿಂದ ರೈತರ ವಿದ್ಯುತ್ ಬಿಲ್ ಹೊರೆ 30 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಹಂತ ಹಂತವಾಗಿ ಸರಿಪಡಿಸಲಿದೆ ಎಂದು ಭರವಸೆ ನೀಡಿದರು.
#MekedatuProject #CMDKShivakumar #CauveryWater #KarnatakaPolitics #NarendraModi #BangaloreMetro #Udayakala #FarmersElectricity

Related Posts

Leave a Reply

Your email address will not be published. Required fields are marked *