Saturday, November 14, 2026
Menu

ತಮಿಳುನಾಡಿನಲ್ಲಿ ಹಕ್ಕಿ ಜ್ವರ: 5 ಫಾರ್ಮ್‌ಗಳಲ್ಲಿ 35,647 ಕೋಳಿಗಳು ಸಾವು!

ಉದಯಕಾಲ ನ್ಯೂಸ್‌, ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಮಾರಕ ಹಕ್ಕಿ ಜ್ವರ ವೈರಸ್ ದೃಢಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ವಿವಿಧ ಕೋಳಿ ಫಾರಂಗಳಲ್ಲಿ ಹಠಾತ್ ಸಾವುಗಳು ಸಂಭವಿಸಿದ್ದು, ಇದುವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ಜಿಲ್ಲಾಡಳಿತವು, ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಫಾರ್ಮ್‌ಗಳ ಎಲ್ಲಾ ಕೋಳಿಗಳನ್ನು ಕೊಲ್ಲಲು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ.

ಭೋಪಾಲ್ ಪ್ರಯೋಗಾಲಯದಲ್ಲಿ H5N1 ವೈರಸ್ ದೃಢೀಕರಣ

ಕಡಲೂರು ಜಿಲ್ಲೆಯ ಕುರಿಂಜಪಾಡಿ ತಾಲೂಕಿನ ಕತ್ತಿಯಾಂಕುಪ್ಪಂ ಗ್ರಾಮದ ಕೋಳಿ ಫಾರಂ ಒಂದರಲ್ಲಿ ಕೋಳಿಗಳು ನಿಗೂಢವಾಗಿ ಸಾಯುತ್ತಿರುವುದನ್ನು ಗಮನಿಸಿದ ಸ್ಥಳೀಯ ಆಡಳಿತ, ನವೆಂಬರ್ 5ರಂದು ಹೆಚ್ಚಿನ ಪರೀಕ್ಷೆಗಾಗಿ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿತ್ತು. ಆ ಮಾದರಿಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ನಡೆಸಿದ ವೈಜ್ಞಾನಿಕ ಪರೀಕ್ಷೆಗಳಲ್ಲಿ ಕೋಳಿಗಳಲ್ಲಿ ಹೆಚ್5ಎನ್1 (H5N1) ವೈರಸ್ ಇರುವುದು ನವೆಂಬರ್ 13ರಂದು ಅಧಿಕೃತವಾಗಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ 30ರಂದು ತಿಯಾಗವಲ್ಲಿ ಪಂಚಾಯಿತಿಯ ತಮನಾಂಪಟ್ಟಿ ಗ್ರಾಮದ ಫಾರಂ ಒಂದರಲ್ಲಿ ಕೋಳಿಗಳ ಹಠಾತ್ ಸಾವು ಆರಂಭವಾಗಿತ್ತು. ಅಂದಿನಿಂದ ನವೆಂಬರ್ 13ರ ವರೆಗಿನ ಅವಧಿಯಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬರೋಬ್ಬರಿ 35 ಸಾವಿರಕ್ಕೂ ಅಧಿಕ ಕೋಳಿಗಳು ಜೀವ ಬಿಟ್ಟಿವೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಸೋಂಕು ನಿಯಂತ್ರಣಕ್ಕೆ 9 ವಿಶೇಷ ತಂಡಗಳ ರಚನೆ ಹಾಗೂ ಕೋಳಿಗಳ ಹತ್ಯೆ

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು, ಒಟ್ಟು 15 ಕೋಳಿ ಫಾರಂಗಳು ಸೋಂಕಿನ ವಲಯದಲ್ಲಿದ್ದು, ಈ ಪೈಕಿ 10 ಫಾರಂಗಳಲ್ಲಿ ಈಗಾಗಲೇ ಎಲ್ಲಾ ಪಕ್ಷಿಗಳು ಸಾವನ್ನಪ್ಪಿವೆ. ಸದ್ಯ ಉಳಿದುಕೊಂಡಿರುವ 5 ಫಾರಂಗಳಲ್ಲಿನ ಇನ್ನುಳಿದ ಎಲ್ಲಾ ಕೋಳಿಗಳನ್ನು ವೈಜ್ಞಾನಿಕ ಮಾರ್ಗಸೂಚಿಗಳ ಅನ್ವಯ ಕೊಲ್ಲಲು ನಿರ್ಧರಿಸಲಾಗಿದೆ. ರೋಗ ಮತ್ತಷ್ಟು ಹಬ್ಬದಂತೆ ಎಚ್ಚರಿಕೆ ವಹಿಸಲು ಒಟ್ಟು 9 ವಿಶೇಷ ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಲಾಗಿದೆ ಎಂದು ತಿಳಿಸಿದ್ದಾರೆ. ನೆರೆಯ ರಾಜ್ಯಗಳಲ್ಲಿಯೂ ಹಕ್ಕಿ ಜ್ವರದ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಆರೋಗ್ಯ ಹಾಗೂ ಪಶುಸಂಗೋಪನಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

#BirdFlu #Cuddalore #TamilNaduNews #H5N1Virus #PoultryFarm #Udayakala #HealthAlert #CurrentNews

Related Posts

Leave a Reply

Your email address will not be published. Required fields are marked *