Saturday, November 14, 2026
Menu

ಮುಂದಿನ ವಾರದಲ್ಲಿ ಹಲವೆಡೆ ಗುಡುಗು, ಮಳೆ, ಗಾಳಿ: ಸಮುದ್ರಕ್ಕೆ ಇಳಿಯದಂತೆ ಐಎಂಡಿ ಹೈಅಲರ್ಟ್!

ಉದಯಕಾಲ ನ್ಯೂಸ್‌, ನವದೆಹಲಿ: ದೇಶದ ಹವಾಮಾನದಲ್ಲಿ ಮತ್ತೊಮ್ಮೆ ಏರುಪೇರಾಗುವ ಸಾಧ್ಯತೆಯಿದ್ದು, ಮುಂದಿನ ಒಂದು ವಾರಗಳ ಕಾಲ ಉತ್ತರ, ಪೂರ್ವ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಹಾಗೂ ಗುಡುಗು ಸಹಿತ ಬಿರುಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ವಿಶೇಷವಾಗಿ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಅಥವಾ ಬಿರುಗಾಳಿಯ ತೀವ್ರತೆ ಹೆಚ್ಚಾಗುವ ಸಂಭವವಿರುವುದರಿಂದ ಸಮುದ್ರವು ಪ್ರಕ್ಷುಬ್ಧಗೊಳ್ಳಲಿದ್ದು, ಮೀನುಗಾರರು ಮತ್ತು ಕಡಲತೀರದ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರ: ಎಲ್ಲಿ, ಯಾವಾಗ ಮುನ್ಸೂಚನೆ?

ವಾಯವ್ಯ ಭಾರತ

ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ನವೆಂಬರ್ 14 ಮತ್ತು 15ರಂದು ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಪಂಜಾಬ್, ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲೂ ಮಳೆಯಾಗಲಿದ್ದು, ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಪೂರ್ವ ಭಾರತ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನವೆಂಬರ್ 19ರವರೆಗೆ ವ್ಯಾಪಕ ಮಳೆ ಮುಂದುವರಿಯಲಿದೆ. ನವೆಂಬರ್ 18 ಮತ್ತು 19ರಂದು ಗಂಗಾ ನದಿಯ ಬಯಲು ಪ್ರದೇಶದ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಭಾರಿ ಮಳೆಯಾಗುವ ಸಂಭವವಿದೆ.

ದಕ್ಷಿಣ ಭಾರತ

ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಹಾಗೂ ಲಕ್ಷದ್ವೀಪದಲ್ಲಿ ನವೆಂಬರ್ 16ರಿಂದ 19ರವರೆಗೆ ವ್ಯಾಪಕವಾಗಿ ಮಳೆ ಸುರಿಯಲಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಭಾಗದಲ್ಲೂ ನವೆಂಬರ್ 18 ಹಾಗೂ 19ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಸಮುದ್ರ ಪ್ರಕ್ಷುಬ್ಧ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಕಠಿಣ ಎಚ್ಚರಿಕೆ

ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ವಿವಿಧ ಭಾಗಗಳಲ್ಲಿ ಗಂಟೆಗೆ 40 ರಿಂದ 80 ಕಿ.ಮೀ ವರೆಗೆ ಪ್ರಬಲ ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಮುದ್ರದ ಮೇಲಿನ ಹವಾಮಾನ ತೀವ್ರವಾಗಿ ಹದಗೆಡಲಿದೆ. ನವೆಂಬರ್ 17ರಿಂದ ಬಂಗಾಳ ಕೊಲ್ಲಿಯ ನೈಋತ್ಯ ಹಾಗೂ ಮಧ್ಯ ಭಾಗದಲ್ಲಿ ಗಂಟೆಗೆ 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ತೆರಳಿರುವ ಮೀನುಗಾರರು ನವೆಂಬರ್ 15ರೊಳಗೆ ಸುರಕ್ಷಿತವಾಗಿ ದಡಕ್ಕೆ ಮರಳುವಂತೆ ಐಎಂಡಿ ಸೂಚಿಸಿದೆ. ಅಂಡಮಾನ್ ಸಮುದ್ರ, ಆಗ್ನೇಯ, ನೈಋತ್ಯ ಹಾಗೂ ಮಧ್ಯ ಬಂಗಾಳ ಕೊಲ್ಲಿಯ ವಿವಿಧ ಪ್ರದೇಶಗಳಿಗೆ ನವೆಂಬರ್ 14ರಿಂದ 19ರವರೆಗೆ ಮೀನುಗಾರರು ಯಾವುದೇ ಕಾರಣಕ್ಕೂ ತೆರಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
#IMDAlert #WeatherUpdate #HeavyRain #BayOfBengal #FishermenWarning #Udayakala #IndiaWeather #MonsternStorm

Related Posts

Leave a Reply

Your email address will not be published. Required fields are marked *