ಉದಯಕಾಲ ನ್ಯೂಸ್, ಲಕ್ನೋ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹಾಗೂ ಆಜಾದ್ ಸಮಾಜ ಪಕ್ಷದ ಅಧ್ಯಕ್ಷ, ಸಂಸದ ಚಂದ್ರಶೇಖರ್ ಆಜಾದ್ ಅವರು ಕೈಜೋಡಿಸಿದ್ದು, ‘ಸಾಮಾಜಿಕ ಪರಿವರ್ತನ ಮೋರ್ಚಾ’ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು, ಚಂದ್ರಶೇಖರ್ ಆಜಾದ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿರುವುದು ಉತ್ತರ ಪ್ರದೇಶ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.
ಲಕ್ನೋದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸಾದುದ್ದೀನ್ ಒವೈಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ತಮ್ಮ ಮೈತ್ರಿಯ ಮುಖ್ಯ ಗುರಿ ಎಂದರು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಧ್ವನಿಯಾಗಿ ಈ ಮೈತ್ರಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು.
ಆಜಾದ್ ಸಿಎಂ ಅಭ್ಯರ್ಥಿ ಹಾಗೂ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ
ಚಂದ್ರಶೇಖರ್ ಆಜಾದ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಒವೈಸಿ, ಆಜಾದ್ ನೇತೃತ್ವದಲ್ಲಿ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು. ರಾಜ್ಯದ ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ, ರೈತರು ಸಂಕಷ್ಟದಲ್ಲಿದ್ದಾರೆ ಹಾಗೂ ಇತರ ಪಕ್ಷಗಳು ಇವರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿವೆ ಎಂದು ಆರೋಪಿಸಿದರು.
ಈ ಮೈತ್ರಿಯನ್ನು ಕೇವಲ ಮೂರನೇ ರಂಗ ಎಂದು ಕರೆಯಬಾರದು, ಬದಲಿಗೆ ಇದು ಸಾಮಾಜಿಕ ಬದಲಾವಣೆಗಾಗಿ ರೂಪುಗೊಂಡಿರುವ ‘ಮೊದಲ ರಂಗ’ ಎಂದು ಚಂದ್ರಶೇಖರ್ ಆಜಾದ್ ಬಣ್ಣಿಸಿದರು. ಸರ್ಕಾರಗಳು ಬದಲಾದರೂ ಬಹುಜನರ ಸ್ಥಿತಿ ಸುಧಾರಿಸಿಲ್ಲ. ಹತ್ರಾಸ್ ಪ್ರಕರಣ, ಲಕ್ನೋದಲ್ಲಿ ರಾಮಶಂಕರ್ ವಾಲ್ಮೀಕಿ ಹತ್ಯೆ ಹಾಗೂ ದಲಿತರ ಮೇಲಿನ ದೌರ್ಜನ್ಯಗಳು ಬಿಜೆಪಿ ದುರಾಡಳಿತದಿಂದ ರಾಜ್ಯದ ಹದಗೆಟ್ಟಿರುವುದಕ್ಕೆ, ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿ ಎಂದು ಅವರು ವಾಗ್ದಾಳಿ ನಡೆಸಿದರು. ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯತ್ನಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇತರ ಪಕ್ಷಗಳಿಗೆ ಮುಕ್ತ ಆಹ್ವಾನ: ನವೆಂಬರ್ 26ರಂದು ಬೃಹತ್ ಸಮಾವೇಶ
ಸೀಟು ಹಂಚಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಆಜಾದ್, ಬಿಜೆಪಿಯನ್ನು ಮಣಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕೂಡ ತಮ್ಮ ಮೈತ್ರಿಕೂಟದೊಂದಿಗೆ ಕೈಜೋಡಿಸಲು ಬಯಸಿದರೆ ಸ್ವಾಗತಿಸುವುದಾಗಿ ಮುಕ್ತ ಆಹ್ವಾನ ನೀಡಿದರು. ಸಾಮಾಜಿಕ ಪರಿವರ್ತನೆಯ ಚಳವಳಿಗೆ ರಾಜ್ಯಾದ್ಯಂತ ಚಾಲನೆ ನೀಡಲು ಇದೇ ನವೆಂಬರ್ 26ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದು ಎಂದು ಒವೈಸಿ ಘೋಷಿಸಿದರು.
#UttarPradeshElections #Owaisi #ChandrashekharAzad #SamajikParivartanMorcha #UPPolitics #AIMIM #UdayakalaNews


