ಉದಯಕಾಲ ನ್ಯೂಸ್, ಮಂಗಳೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮತ್ತು ದಂಗೆ ಎಬ್ಬಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಅದರ ಹೈಕಮಾಂಡ್ ಪರಿವಾರವನ್ನು ಅರಬ್ಬಿ ಸಮುದ್ರಕ್ಕೆ ಎಸೆಯುವ ತಾಕತ್ತು ಭಾರತದ ಜನರಿಗಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಸಾಂವಿಧಾನಿಕ ಪ್ರಕ್ರಿಯೆಯಾದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು (SIR) ವಿರೋಧಿಸುತ್ತಿರುವ ಕಾಂಗ್ರೆಸ್ನ ಅರಾಜಕತಾವಾದ ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧದಿಂದ ಕದ್ರಿ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಾಗೂ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.
ಮೋದಿ ಎಲ್ಲಿಗೂ ಹೋಗುವುದಿಲ್ಲ, ಕಾಂಗ್ರೆಸ್ಸಿಗರೇ ಎಚ್ಚರ
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ, “ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿ, ‘ಮೋದಿ ಕಹೀಂ ನಹೀ ಜಾಯೇಗಾ’ (ಮೋದಿ ಎಲ್ಲಿಗೂ ಹೋಗುವುದಿಲ್ಲ). ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ 142 ಕೋಟಿ ಜನರ ಹೃದಯಗಳಲ್ಲಿ ನೆಲೆಸಿದ್ದಾರೆ. ಜನಾದೇಶವನ್ನು ಗೌರವಿಸದೆ ಸಮಾಜದಲ್ಲಿ ಬೆಂಕಿ ಹಚ್ಚಲು ಸಂಚು ರೂಪಿಸುತ್ತಿರುವ ನಿಮ್ಮ ಪರಿವಾರ ಮತ್ತು ಹೈಕಮಾಂಡ್ ಅನ್ನು ಅರಬ್ಬಿ ಸಮುದ್ರಕ್ಕೆ ಎಸೆಯಲು ದೇಶದ ಜನತೆ ಸಿದ್ಧರಿದ್ದಾರೆ” ಎಂದು ಗುಡುಗಿದರು.
ದೇಶದ ಪ್ರಗತಿ ಹಾಗೂ ಆರ್ಥಿಕ ಸ್ಥಿರತೆಯನ್ನು ಹಳ್ಳಹಿಡಿಸಲು ಹವಣಿಸುತ್ತಿರುವ ಸಂವಿಧಾನ ವಿರೋಧಿಗಳನ್ನು ‘ದೇಶದ್ರೋಹಿಗಳು’ ಎಂದು ಕರೆಯಬೇಕಿದೆ ಎಂದು ಕಿಡಿಕಾರಿದ ಅವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಆ ದುರುದ್ದೇಶದ ಬೆಂಕಿಯಲ್ಲೇ ಕಾಂಗ್ರೆಸ್ ಸುಟ್ಟು ಭಸ್ಮವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನಕಲಿ ಮತದಾರರನ್ನು ರಕ್ಷಿಸಲು ಕಾಂಗ್ರೆಸ್ ಎಸ್ಐಆರ್ ವಿರೋಧ: ತೇಜಸ್ವಿ ಸೂರ್ಯ
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಪಕ್ಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಏಕೆ ವಿರೋಧಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ನೀಡಿದರು. ಸ್ಪೀಕರ್ ಯು.ಟಿ. ಖಾದರ್ ಅವರ ಉಳ್ಳಾಲ ಕ್ಷೇತ್ರದ ತಲಪಾಡಿ ಗ್ರಾಮದ ನಿವಾಸಿ, ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಸತ್ಯಮೂರ್ತಿ ಅವರು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವೇ ಕಾಂಗ್ರೆಸ್ನ ಬೋಗಸ್ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದರು.
ತಮ್ಮ ಮನೆಯ ವಿಳಾಸದಲ್ಲಿ ಕಳೆದ 35 ವರ್ಷಗಳಿಂದ ತಾವೇ ವಾಸವಿದ್ದರೂ, ವೋಟರ್ ಲಿಸ್ಟ್ಗೆ ನಾಲ್ವರು ಅಪರಿಚಿತರ ಹೆಸರುಗಳನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ ಅವರು, ಇಂತಹ ನಕಲಿ ಮತದಾರರನ್ನು ಹಾಗೂ ಅಕ್ರಮ ನುಸುಳುಕೋರರನ್ನು ರಕ್ಷಿಸುವುದಕ್ಕಾಗಿಯೇ ಕಾಂಗ್ರೆಸ್ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಬಾಂಗ್ಲಾದೇಶ, ನೇಪಾಳದಂತೆ ದಂಗೆ ಮಾಡುತ್ತೇವೆ ಎನ್ನುವವರಿಗೆ ಇದು ನರೇಂದ್ರ ಮೋದಿಯವರ ಭಾರತ ಎಂದು ತಿರುಗೇಟು ನೀಡಿದರು.
ಈ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು ಹಾಗೂ ಕರಾವಳಿಯ ಪ್ರಮುಖ ಜನಪ್ರತಿನಿಧಿಗಳು ಮತ್ತು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
#SureshGopi #TejasviSurya #MallikarjunKharge #MangaloreNews #BJPProtest #SIR #UdayakalaNews #KarnatakaPolitics

