ಉದಯಕಾಲ ನ್ಯೂಸ್, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ಗೆ ತಮ್ಮ ತಂದೆಯ ಮೊದಲ ವರ್ಷದ ವಾರ್ಷಿಕ ತಿಥಿ (ಪಿತೃಕಾರ್ಯ) ಕಾರ್ಯದಲ್ಲಿ ಭಾಗಿಯಾಗಲು ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಪ್ರದೋಷ್ ಪರ ವಕೀಲರು ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ.
ಷರತ್ತುಬದ್ಧ ಅವಕಾಶ ಹಾಗೂ ಸೆಷನ್ಸ್ ಕೋರ್ಟ್ಗೆ ಆದೇಶ ಸಲ್ಲಿಕೆ
ತಂದೆಯ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ನವೆಂಬರ್ 7ರಿಂದ ನವೆಂಬರ್ 12ರವರೆಗೆ ಒಟ್ಟು 5 ರಿಂದ 6 ದಿನಗಳ ಕಾಲ ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಈ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಸಮಯ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರದೋಷ್ ಪರ ವಕೀಲರು ನಗರದ 59ನೇ ಸೆಷನ್ಸ್ ಕೋರ್ಟ್ಗೆ ಹೈಕೋರ್ಟ್ನ ಅಧಿಕೃತ ಆದೇಶದ ಪ್ರತಿಯನ್ನು ಒದಗಿಸಿದ್ದಾರೆ.
ಪ್ರಕರಣದ ಸಂವೇದನಾಶೀಲತೆಯನ್ನು ಪರಿಗಣಿಸಿ ಸೆಷನ್ಸ್ ನ್ಯಾಯಾಲಯವು 1 ಲಕ್ಷ ರೂ. ಬಾಂಡ್ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ವಿಧಿಸಿದೆ. ನಿಗದಿತ ಅವಧಿ ಮುಗಿದ ಕೂಡಲೇ ಪ್ರತಿದಿನ ಸಂಜೆ 6 ಗಂಟೆಯೊಳಗೆ ಪ್ರದೋಷ್ ಕಡ್ಡಾಯವಾಗಿ ಜೈಲಿಗೆ ವಾಪಸ್ ಹಿಂತಿರುಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಕಟ್ಟುನಿಟ್ಟಿನ ಷರತ್ತುಗಳು ಮತ್ತು ಪೊಲೀಸ್ ಭದ್ರತೆ
ನ್ಯಾಯಾಲಯದ ಸೂಚನೆಯಂತೆ ಪ್ರದೋಷ್ಗೆ ನಗರ ಸಶಸ್ತ್ರ ಮೀಸಲು ಪೊಲೀಸ್ (CAR) ಪಡೆಯ ಕಾವಲು ಹಾಗೂ ಬೆಂಗಾವಲು ಒದಗಿಸಲಾಗಿದ್ದು, ತಿಥಿ ಕಾರ್ಯದ ಸಂದರ್ಭದಲ್ಲಿಯೂ ಪೊಲೀಸರ ಹದ್ದಿನ ಕಣ್ಣಿರಲಿದೆ. ವಿಚಾರಣಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ಶೀಟ್ನಲ್ಲಿರುವ ಇತರ ಆರೋಪಿಗಳ ಅಥವಾ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕ ಹೊಂದಬಾರದು. ಪ್ರಕರಣದ ಪ್ರಮುಖ ಸಾಕ್ಷಿಗಳ ಜತೆ ಸಂಪರ್ಕಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಕುಟುಂಬದ ಸದಸ್ಯರು, ಅಡುಗೆ ಮಾಡುವವರು ಹಾಗೂ ಪುರೋಹಿತರ ಸಂಪೂರ್ಣ ವಿವರ ಮತ್ತು ಪಟ್ಟಿಯನ್ನು ಮುಂಚಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.ಕಾನೂನಿನ ದುರ್ಬಳಕೆ ಮಾಡಿಕೊಳ್ಳದಂತೆ ಮತ್ತು ಯಾವುದೇ ಸಾಕ್ಷ್ಯ ತಿರುಚದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
#RenukaswamyCase #Pradosh #KarnatakaHighCourt #Darshan ##CrimeNews #BangaloreNews


