Menu

ಪಿಂಚಣಿ ಸಮಸ್ಯೆ 15 ದಿನಗಳಲ್ಲಿ ಬಗೆಹರಿಯಲಿದೆ: ಡಿಸಿಎಂ ಜಿ.ಪರಮೇಶ್ವರ್ ಭರವಸೆ

ಉದಯಕಾಲ ನ್ಯೂಸ್, ಬೆಂಗಳೂರು: ಸ್ಥಗಿತಗೊಂಡಿದ್ದ ಸಾಮಾಜಿಕ ಭದ್ರತಾ ಪಿಂಚಣಿ ವಿತರಣೆ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದ್ದು, ಮುಂದಿನ 15 ದಿನಗಳೊಳಗೆ ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೃದ್ಧಾಪ್ಯ ಮತ್ತು ಅಂಗವಿಕಲ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲು ಕಾರಣವಾದ ಅಂಶಗಳನ್ನು ವಿವರಿಸಿದರು.

ವಾರ್ಷಿಕ ಆದಾಯ ಮಿತಿಯನ್ನು ರೂ. 30,000 ದಿಂದ ರೂ. 1.20 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಅರ್ಹರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಆದರೆ, ವೃದ್ಧಾಪ್ಯ ಪಿಂಚಣಿಗೆ ನಿಗದಿತ 60 ವರ್ಷ ವಯಸ್ಸು ತಲುಪದ 20, 30 ಹಾಗೂ 40 ವರ್ಷದವರೂ ಸಹ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಇಂತಹ ಸುಮಾರು 23 ಲಕ್ಷ ಅನರ್ಹ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪಿಂಚಣಿ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ತಿಳಿಸಿದರು.

ಬರ ಪರಿಹಾರ ಮತ್ತು ರೈತರಿಗೆ ತಲಾ ರೂ.5,000 ನೆರವು

ರಾಜ್ಯದಲ್ಲಿ ಬರದಿಂದ ಒಟ್ಟು ಅಂದಾಜು ರೂ.62,000 ಕೋಟಿ ನಷ್ಟ ಉಂಟಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ ರೂ.22,000 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು. ಪ್ರಧಾನಮಂತ್ರಿ ಹಾಗೂ ಸಂಬಂಧಿತ ಸಚಿವರ ಭೇಟಿಗೆ ಸಮಯಾವಕಾಶ ಕೋರಲಾಗಿದ್ದು, ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಾಗುವುದು ಎಂದರು. ಅಲ್ಲದೆ, ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ರೈತರಿಗೆ ತಲಾ ರೂ.2,500 ಪರಿಹಾರವನ್ನು ಡಿಬಿಟಿ ಮೂಲಕ ನೀಡುತ್ತಿದ್ದು, ಇದೀಗ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿಯಾಗಿ ಮತ್ತೊಂದು ರೂ.2,500 ನೀಡುವುದಾಗಿ ಸಮ್ಮತಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಈ ಹೆಚ್ಚುವರಿ ಮೊತ್ತವೂ ಬಿಡುಗಡೆಯಾಗಲಿದ್ದು, ರೈತರಿಗೆ ಒಟ್ಟು ತಲಾ ರೂ.5,000 ಪರಿಹಾರ ಸಿಗಲಿದೆ ಎಂದರು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.1 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಬೆಲೆಯೇರಿಕೆ ಟೀಕೆಗಳಿಗೆ ತಿರುಗೇಟು, ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ

ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ದರ ಏರಿಕೆ ಪ್ರತಿಭಟನೆಗೆ ತಿರುಗೇಟು ನೀಡಿದ ಡಿಸಿಎಂ ಪರಮೇಶ್ವರ್, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು 14 ಬಾರಿ ಏರಿಕೆ ಮಾಡಲಾಗಿದೆ. ಇಂಧನ ದರ ಹೆಚ್ಚಳವಾದಾಗ ಸಾರಿಗೆ ಮತ್ತು ಕೃಷಿ ವೆಚ್ಚವೂ ಹೆಚ್ಚಾಗುತ್ತದೆ. ಇದನ್ನು ಮರೆಮಾಚಿ ರಾಜ್ಯ ಸರ್ಕಾರವನ್ನು ಮಾತ್ರ ಟೀಕಿಸುವುದು ಅರ್ಥಹೀನ ಎಂದರು.

ಇನ್ನು ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಮಾತನಾಡಿ, ರಾಜ್ಯಾದ್ಯಂತ ಸುಮಾರು 1 ಕೋಟಿ 8 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರಿನಲ್ಲಿ ಗೊಂದಲಗಳಿದ್ದು, ಹೊಸ ಸ್ಥಳದ ಪಟ್ಟಿಯಲ್ಲೂ ಹೆಸರು ಸೇರ್ಪಡೆಯಾಗದೆ ಇರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸರ್ಕಾರದ ಅಸಮಾಧಾನ ವ್ಯಕ್ತಪಡಿಸಿದರು.

#SocialSecurityPension #DCMParameshwara #KarnatakaDroughtRelief #FarmerCompensation #SIRIssue #UdayakalaNews

Related Posts

Leave a Reply

Your email address will not be published. Required fields are marked *