Menu

ಕರ್ನಾಟಕ ಪೆಟ್ರೋಲ್‌ನಲ್ಲಿ ಹೆಚ್ಚಿನ ಎಥೆನಾಲ್ ಮಿಶ್ರಣ: ರಿಜ್ವಾನ್ ಗಂಭೀರ ಆರೋಪ

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಇಂಧನದಲ್ಲಿ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಎಥೆನಾಲ್ ಬೆರೆಸಲಾಗಿದ್ದು, ಕೇಂದ್ರ ಬಿಜೆಪಿ ಸರ್ಕಾರದಿಂದ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಮತ್ತು ವಾಹನಗಳಿಗೆ ಹಾನಿಯುಂಟಾಗುತ್ತಿದೆ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಇಂಧನ ಕಂಪನಿಗಳ ಪೆಟ್ರೋಲ್ ಮಾದರಿಗಳನ್ನು NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಇಂಧನ ಕಂಪನಿಗಳ ಸ್ವಂತ ಲ್ಯಾಬ್‌ಗಳಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಮುಚ್ಚಿಡಲಾಗಿದ್ದು, ನಿಯಮಾನುಸಾರ ನಡೆಸಿದ ಮರುಪರೀಕ್ಷೆಯಲ್ಲಿ IOCL ಪೆಟ್ರೋಲ್‌ನಲ್ಲಿ ಶೇ.31.2 ಹಾಗೂ HPCL ಪೆಟ್ರೋಲ್‌ನಲ್ಲಿ ಶೇ.30.5ರವರೆಗೆ ಎಥೆನಾಲ್ ಮಿಶ್ರಣವಿರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ಗ್ರಾಹಕರಿಗೆ ದೊಡ್ಡ ಹೊಡೆತ, ವಾಹನಗಳಿಗೆ ಹಾನಿ

ಮಿತಿಮೀರಿದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯಲಿದ್ದು, ಕೇಂದ್ರ ಬಿಜೆಪಿ ಸರ್ಕಾರ ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ದೇಶದಲ್ಲಿ ವಾರ್ಷಿಕ 6,200 ಕೋಟಿ ಲೀಟರ್ ಇಂಧನ ಬಳಕೆಯಾಗುತ್ತಿದ್ದು, ಶೇ. 10ರಷ್ಟು ಮೈಲೇಜ್ ಕಡಿಮೆಯಾದರೆ ಗ್ರಾಹಕರ ಮೇಲೆ ವರ್ಷಕ್ಕೆ ಬರೋಬ್ಬರಿ ರೂ.62,000 ಕೋಟಿ ಆರ್ಥಿಕ ಹೊರೆ ಬೀಳಲಿದೆ. ಇಷ್ಟೇ ಅಲ್ಲದೆ, E20 (ಶೇ. 20 ಎಥೆನಾಲ್)ಗಿಂತ ಹೆಚ್ಚಿನ ಇಂಧನಕ್ಕೆ ತಕ್ಕಂತೆ ರೂಪುಗೊಳ್ಳದ ವಾಹನಗಳ ಫಿಲ್ಟರ್, ಪ್ಯೂಯಲ್ ಪಂಪ್, ಇಂಜೆಕ್ಟರ್ ಹಾಗೂ ಸೀಲ್‌ಗಳು ಹಾನಿಗೊಳಗಾಗುವುದರಿಂದ ರಿಪೇರಿಗಾಗಿ ಹೆಚ್ಚುವರಿಯಾಗಿ ರೂ.39,000 ಕೋಟಿ ವೆಚ್ಚವಾಗಲಿದೆ. ಒಟ್ಟಾರೆಯಾಗಿ ಪ್ರತಿವರ್ಷ ಗ್ರಾಹಕರ ಮೇಲೆ ರೂ.1.01 ಲಕ್ಷ ಕೋಟಿಯಷ್ಟು ಪರೋಕ್ಷ ಹೊರೆ ಬೀಳುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ದೇಶದ ಶೇ. 99ರಷ್ಟು ವಾಹನಗಳು E20 ಗಿಂತ ಹೆಚ್ಚಿನ ಮಿಶ್ರಣಕ್ಕೆ ಸಿದ್ಧವಾಗಿಲ್ಲದಿರುವುದು ದೊಡ್ಡ ಆತಂಕದ ವಿಷಯವಾಗಿದೆ.

ಕೇಂದ್ರ ಹಾಗೂ ತೈಲ ಕಂಪನಿಗಳ ವಿರುದ್ಧ ಆಕ್ರೋಶ

ವಿದೇಶಿ ವಿನಿಮಯ ಉಳಿತಾಯದ ಹೆಸರಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಈ ನೀತಿಯ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಆದರೆ ತೈಲ ಕಂಪನಿಗಳು ಬಹು ದೊಡ್ಡ ಲಾಭ ಗಳಿಸುತ್ತಿವೆ ಎಂದು ಸಚಿವರು ಕಿಡಿಕಾರಿದರು. ಈ ಅಕ್ರಮ ಮಿಶ್ರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು

ಕೇಂದ್ರ ಸಚಿವಾಲಯಗಳು ಪೆಟ್ರೋಲ್‌ನಲ್ಲಿರುವ ಎಥೆನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.
ನಿಮಗಿಂತ ಹೆಚ್ಚು ಎಥೆನಾಲ್ ಪೂರೈಸುತ್ತಿರುವ IOCL, BPCL, HPCL ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಹಾನಿಗೊಳಗಾದ ವಾಹನ ಮಾಲೀಕರಿಗೆ ‘E20 ಹಾನಿ ಪರಿಹಾರ ನಿಧಿ’ಯ ಮೂಲಕ ಕಾಲಮಿತಿಯೊಳಗೆ ಪರಿಹಾರ ಒದಗಿಸಬೇಕು.
ಪ್ರತಿ ಪೆಟ್ರೋಲ್ ಪಂಕ್‌ನಲ್ಲೂ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ, ಗ್ರಾಹಕರಿಗೆ ಇಂಧನ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು.
ರಾಜ್ಯದಲ್ಲಿ ಇಂಧನ ತಪಾಸಣೆಗಳನ್ನು ಮುಂದುವರಿಸಲಾಗುವುದು ಹಾಗೂ ಲೋಪ ಎಸಗುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವರು ಎಚ್ಚರಿಸಿದ್ದಾರೆ.

#PetroleumScam #RizwanArshad #EthanolBlending #KarnatakaNews #ConsumerRights #FuelPrices

Related Posts

Leave a Reply

Your email address will not be published. Required fields are marked *