Thursday, November 05, 2026
Menu

ಉತ್ತರ ಪ್ರದೇಶದಲ್ಲಿ ಪತ್ನಿಯನ್ನು ಕುರ್ಚಿಗೆ ಕಟ್ಟಿ ಸಜೀವ ದಹನ ಮಾಡಿದ ಪತಿ

ಉದಯಕಾಲ ನ್ಯೂಸ್, ಕನೌಜ್ (ಉತ್ತರ ಪ್ರದೇಶ): ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆಯಡಿ ಕ್ರೂರಿ ಗಂಡ, ಆಕೆಯನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಸಜೀವವಾಗಿ ದಹನ ಮಾಡಿರುವ ಅತ್ಯಂತ ಭೀಕರ ಘಟನೆ ಕನೌಜ್ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಅಮಾನುಷ ಕೃತ್ಯದ ಬಳಿಕ ಆರೋಪಿ ಪತಿ ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಛಿಬ್ರಮೌ ಪೊಲೀಸ್ ಠಾಣಾ ವ್ಯಾಪ್ತಿಯ ಜಗತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಸೋನಮ್ ಎಂದು ಗುರುತಿಸಲಾಗಿದೆ. ಅಗ್ನಿ ದುರಂತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಒಂದುವರೆ ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಹತೋಟಿಗೆ ತಂದರು. ಬಳಿಕ ಮನೆಯೊಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಸೋನಮ್ ಅವರ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದೆ. ಕೃತ್ಯದ ಬಳಿಕ ಆರೋಪಿ ಸುಖಬೀರ್ ಸಿಂಗ್ ಅಲಿಯಾಸ್ ಮೋನು, ತನ್ನ 7 ವರ್ಷದ ಮಗ ಹಾಗೂ 5 ವರ್ಷದ ಮಗಳನ್ನು ಕರೆದುಕೊಂಡು ತಲೆಮರೆಸಿಕೊಂಡಿದ್ದಾನೆ.

ಕೌಟುಂಬಿಕ ಹಿನ್ನೆಲೆ ಹಾಗೂ ಕೊಲೆಗೆ ಅಸಲಿ ಕಾರಣ

ಮೃತ ಸೋನಮ್ ಹಾಗೂ ಸುಖಬೀರ್ ದಂಪತಿಗೆ 11 ವರ್ಷಗಳ ಹಿಂದೆ ಮದುವೆಯಾಗಿತ್ತು. ಆರೋಪಿ ಸುಖಬೀರ್ ಹರಿಯಾಣದ ಹಿಸ್ಸಾರ್‌ನಲ್ಲಿ ಖಾಸಗಿ ಉದ್ಯೋಗಿಯಾಗಿದ್ದು, ಕೇವಲ 15 ದಿನಗಳ ಹಿಂದಷ್ಟೇ ಕುಟುಂಬದ ಭೇಟಿಗಾಗಿ ಊರಿಗೆ ಮರಳಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಖಬೀರ್‌ಗೆ ತನ್ನ ಪತ್ನಿ ಸೋನಮ್ ಸ್ಥಳೀಯ ಯುವಕನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ತೀವ್ರ ಅನುಮಾನವಿತ್ತು. ಇತ್ತೀಚೆಗೆ ಸೋನಮ್ ಆ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಆತ ಕಣ್ಣಾರೆ ಕಂಡಿದ್ದನು. ಇದರಿಂದ ಆಕ್ರೋಶಗೊಂಡಿದ್ದ ಆತನ ಸಂಶಯ ಮತ್ತಷ್ಟು ಬಲಗೊಂಡಿತ್ತು. ಕಳೆದ ಎರಡು ದಿನಗಳಿಂದ ದಂಪತಿಗಳ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ಹಾಗೂ ವಾಗ್ವಾದಗಳು ನಡೆಯುತ್ತಿದ್ದವು ಎಂದು ಛಿಬ್ರಮೌ ಠಾಣಾಧಿಕಾರಿ ಕಪಿಲ್ ದುಬೆ ತಿಳಿಸಿದ್ದಾರೆ.

ಕುರ್ಚಿಗೆ ಕಟ್ಟಿ ಪೆಟ್ರೋಲ್ ಹಾಕಿ ಕೊಲೆ

ಇಂದು ಬೆಳಗಿನ ಜಾವ ಸಿಟ್ಟಿಗೆದ್ದ ಸುಖಬೀರ್, ಅತಿ ಕ್ರೂರವಾಗಿ ವರ್ತಿಸಿ ಹೆಂಡತಿಯನ್ನು ಕುರ್ಚಿಗೆ ಬಿಗಿಯಾಗಿ ಕಟ್ಟಿಹಾಕಿದ್ದಾನೆ. ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ. ಮನೆಯಿಂದ ದಟ್ಟ ಹೊಗೆ ಹಾಗೂ ಬೆಂಕಿ ಆವರಿಸಿಕೊಳ್ಳುವುದನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಮಾಡಿ ಮಾಹಿತಿ ನೀಡಿದರು.

ಬೆಂಕಿ ನಂದಿಸಿದ ಬಳಿಕ ಒಳಗೆ ಹೋಗಿ ನೋಡಿದಾಗ ಸೋನಮ್ ಅವರ ದೇಹ ಸಂಪೂರ್ಣವಾಗಿ ಸುಟ್ಟು ಅಸ್ಥಿಪಂಜರದಂತಾಗಿತ್ತು. ಪರೀಕ್ಷೆಗಳ ಬಳಿಕ ಅದು ಸೋನಮ್ ಅವರದೇ ಮೃತದೇಹ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ನರಾಧಮ ಸುಖಬೀರ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಈ ಭಯಾನಕ ಹತ್ಯೆ ಪ್ರಕರಣವು ಇಡೀ ಗ್ರಾಮದಲ್ಲಿ ತೀವ್ರ ಆಘಾತ ಹಾಗೂ ಶೋಕವನ್ನುಂಟು ಮಾಡಿದೆ.
#KannaujCrime #UpNews #WifeMurder #ExtramaritalAffairSuspicion #PoliceInvestigation #UdayakalaNews #AntiUPNews

Related Posts

Leave a Reply

Your email address will not be published. Required fields are marked *