Wednesday, November 04, 2026
Menu

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ: ಪ್ರಮೋದಾ ದೇವಿ ಒಡೆಯರ್

ಉದಯಕಾಲ ನ್ಯೂಸ್, ಮೈಸೂರು: ಮೈಸೂರು ಅರಮನೆಯು ಸಂಪೂರ್ಣವಾಗಿ ಖಾಸಗಿ ಸ್ವತ್ತಾಗಿದ್ದು, ಇದನ್ನು ಸರ್ಕಾರ ಕಟ್ಟಿಸಿಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆಯ ಮಾಲೀಕತ್ವ, ದಸರಾ ಅಂಬಾರಿ ಹಾಗೂ ಇತ್ತೀಚಿನ ವಿವಾದಗಳ ಕುರಿತು ತಮ್ಮ ನಿಲುವನ್ನು ಕೃಢಪಡಿಸುವುದರೊಂದಿಗೆ ಸರ್ಕಾರದ ಧೋರಣೆ ಹಾಗೂ ಪೊಲೀಸ್ ಭದ್ರತಾ ವ್ಯವಸ್ಥೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಅರಮನೆ ಖಾಸಗಿ ಸ್ವತ್ತು ಮತ್ತು ಅಂಬಾರಿ ವಿವಾದಕ್ಕೆ ತೆರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಅರಮನೆ ನಿರ್ವಹಣೆಗೆ ಅರಮನೆ ಆಡಳಿತ ಮಂಡಳಿ ರಚನೆಯಾಗಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ನ್ಯಾಯಾಲಯದ ನಿರ್ದೇಶನದಂತೆ ನಾವು ಇಲ್ಲಿದ್ದೇವೆ ವಿನಃ ಸರ್ಕಾರದ ವಿಶೇಷ ಅನುಗ್ರಹದಿಂದ ಅಲ್ಲ ಎಂದರು. ದಸರಾ ಅಂಬಾರಿ ಮತ್ತು ಸಿಂಹಾಸನ ನಮ್ಮ ವಶದಲ್ಲೇ ಇದೆ, ಮುಂದೆಯೂ ಇರುತ್ತದೆ ಎಂದು ತಿಳಿಸಿದರು.

ಅಂಬಾರಿ ಹಾಗೂ ಸಿಂಹಾಸನವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಟಿಕೆಟ್ ಮಾರಿ ಹಣ ಸಂಪಾದಿಸುತ್ತಿರುವುದರಿಂದ ಗೌರವಧನ (ಹಣ) ನೀಡಲಾಗುತ್ತಿದೆಯೇ ಹೊರತು ಅದು ಬಾಡಿಗೆಯಲ್ಲ ಎಂದ ಸ್ಪಷ್ಟಪಡಿಸಿದರು. ಸರ್ಕಾರಕ್ಕೆ ಸಂಪನ್ಮೂಲವಿದ್ದು, ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ, ಅದಕ್ಕೆ ತನ್ನ ಯಾವುದೇ ಅಭ್ಯಂತರವಿಲ್ಲ ಎಂದು ಪುನರುಚ್ಚರಿಸಿದರು.

ಆನೆ ಆಯ್ಕೆ ಪ್ರಕ್ರಿಯೆ-ಸರ್ಕಾರದೊಂದಿಗಿನ ಮಾತುಕತೆಗೆ ಒಲವು

ಅಂಬಾರಿ ಹೊರುವ ಆನೆಯ ಬಗ್ಗೆ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ಮಾಲೀಕರಾದ ನಮಗಿದೆ ಎಂದು ಸಮರ್ಥಿಸಿಕೊಂಡ ಅವರು, ಕೇವಲ ಐದು ದಿನ ಮುಂಚಿತವಾಗಿ ತಿಳಿಸಿದರೆ ಭರವಸೆ ಮೂಡಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ಜಟ್ಟಿ ಕಾಳಗ ಹಾಗೂ ಪೂಜಾ ವಿಧಿವಿಧಾನಗಳ ಸಂದರ್ಭದಲ್ಲಿ ಪೊಲೀಸರ ಭದ್ರತಾ ವ್ಯವಸ್ಥೆಯಿಂದ ಉಂಟಾದ ತೊಂದರೆಯ ಬಗ್ಗೆ ಮಾತ್ರ ತಾನು ಧ್ವನಿ ಎತ್ತಿದ್ದೇನೆಯೇ ಹೊರತು ರಾಜ್ಯ ಸರ್ಕಾರವನ್ನು ಎಲ್ಲೂ ದೂಷಿಸಿಲ್ಲ ಎಂದರು. “ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿರುವುದಕ್ಕೆ ಧನ್ಯವಾದಗಳು. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಮುಂದಿನ ದಸರೆವರೆಗೂ ಮುಂದುವರಿಸುವುದು ಬೇಡ” ಎಂದು ಮನವಿ ಮಾಡಿದರು. ಅಂಬಾರಿಯ ತೂಕ ಹಾಗೂ ಅದರಲ್ಲಿರುವ ಚಿನ್ನದ ಬಗ್ಗೆ ತಮಗೆ ಆಸಕ್ತಿಯಿಲ್ಲ, ಈ ಬಗ್ಗೆ ಯಾರಿಗೆ ಬೇಕಾದರೂ ಏನೇ ಬರೆಯಲಿ ಎಂದರು.

#PramodaDeviWadiyar #MysorePalace #MysuruDasara #GoldenHowdah #KarnatakaNews #UdayakalaNews#UdayakalaNews

Related Posts

Leave a Reply

Your email address will not be published. Required fields are marked *