ಉದಯಕಾಲ ನ್ಯೂಸ್, ಅಮರಾವತಿ: ಆಂಧ್ರಪ್ರದೇಶದಾದ್ಯಂತ ಅಪ್ಪಳಿಸಿರುವ ‘ಮುರಸು’ ಚಂಡಮಾರುತವು ಭಾರಿ ಅನಾಹುತವನ್ನು ಸೃಷ್ಟಿಸಿದ್ದು, ಗುಂಟೂರು, ಪ್ರಕಾಶಂ, ಕೃಷ್ಣ ಮತ್ತು ಗೋದಾವರಿ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಚಂಡಮಾರುತಕ್ಕೆ ಸಂಬಂಧಿಸಿದ ಪ್ರತ್ಯೇಕ ದುರ್ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆಗಳು ನೀರುಪಾಲಾಗಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಕೂಡಲೇ ಸುರಕ್ಷಿತ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸೋಮವಾರ ಮಧ್ಯರಾತ್ರಿ ಆರಂಭವಾದ ಭಾರೀ ಬಿರುಗಾಳಿ ಸಹಿತ ಮಳೆಯು ಮಂಗಳವಾರ ಮಧ್ಯಾಹ್ನದ ವೇಳೆಗೆ ತೀವ್ರರೂಪ ತಾಳಿದ್ದು, ಆಡಳಿತ ಯಂತ್ರವು ಹೈಅಲರ್ಟ್ ಘೋಷಿಸಿದೆ.
ಪ್ರಕಾಶಂ ಜಿಲ್ಲೆಯಲ್ಲಿ ಭೀಕರ ಮಳೆಯಾರ್ಭಟ: ಓಂಗೋಲು ಕತ್ತಲಲ್ಲಿ, ಸಾರಿಗೆ ಸಂಪರ್ಕ ಕಡಿತ
ಪ್ರಕಾಶಂ ಜಿಲ್ಲೆಯಲ್ಲಿ ಚಂಡಮಾರುತವು ಅಕ್ಷರಶಃ ಪ್ರಳಯ ಸೃಷ್ಟಿಸಿದ್ದು, ನಾಗುಲುಪ್ಪಾಲಪಾಡು ಮಂಡಲದಲ್ಲಿ ಗರಿಷ್ಠ 22.8 ಸೆಂ.ಮೀ ಮಳೆ ದಾಖಲಾಗಿದೆ. ಬಿರುಗಾಳಿಯ ರಭಸಕ್ಕೆ ನೂರಾರು ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂಗೋಲು ನಗರದಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿ ಇಡೀ ನಗರವೇ ಕತ್ತಲೆಯಲ್ಲಿ ಮುಳುಗಿದೆ. ಓಂಗೋಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಬೃಹತ್ ಮರಗಳು ಬಿದ್ದು, ಸ್ವಾತಂತ್ರ್ಯ ಹೋರಾಟಗಾರ ಪ್ರಕಾಶಂ ಪಂತುಲು ಅವರ ಪ್ರತಿಮೆಗೆ ಹಾನಿಯಾಗಿದೆ. ಅಡ್ಡಂಕಿ ಮತ್ತು ದರ್ಶಿ ಮುಖ್ಯ ರಸ್ತೆಗಳಲ್ಲಿ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯರು ಟ್ರಾಕ್ಟರ್ ಸಹಾಯದಿಂದ ಮರಗಳನ್ನು ತೆರವುಗೊಳಿಸಿದ್ದಾರೆ. ಕೊಥಾಪಟ್ನಂ ಬಳಿ ಬಕಿಂಗ್‌ಹ್ಯಾಮ್ ಕಾಲುವೆಗೆ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಗುಂಡಮಾಲಾದಲ್ಲಿ ಅಲೆಗಳ ಅಬ್ಬರಕ್ಕೆ ಮೀನುಗಾರರ ದೋಣಿಗಳು ಮುಳುಗಿವೆ.
ಕೃಷ್ಣ , ಗೋದಾವರಿ ಜಿಲ್ಲೆಗಳಲ್ಲಿ ಮುಳುಗಡೆ ಭೀತಿ: ಪ್ರಕಾಶಂ ಬ್ಯಾರೇಜ್‌ನಿಂದ ನೀರು ಬಿಡುಗಡೆ
ಕೃಷ್ಣ ಜಿಲ್ಲೆಯಲ್ಲಿ ಸರಾಸರಿ 6.6 ಸೆಂ.ಮೀ ಮಳೆಯಾಗಿದ್ದು, ವಿಜಯವಾಡ ನಗರ ಮತ್ತು ಉಪನಗರಗಳ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅದರಲ್ಲೂ ಇಬ್ರಾಹಿಂಪಟ್ನಂನಲ್ಲಿ ಅತಿ ಹೆಚ್ಚು 10.3 ಸೆಂ.ಮೀ ಮಳೆ ಸುರಿದಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಪ್ರಕಾಶಂ ಬ್ಯಾರೇಜ್‌ನ 10 ಗೇಟ್‌ಗಳನ್ನು ಒಂದು ಅಡಿಯಷ್ಟು ಮೇಲಕ್ಕೆತ್ತಿ 7,250 ಕ್ಯೂಸೆಕ್ ನೀರನ್ನು ಸಮುದ್ರಕ್ಕೆ ಹರಿಸಲಾಗಿದೆ. ಇತ್ತ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸರಾಸರಿ 8.04 ಸೆಂ.ಮೀ ಮಳೆ ದಾಖಲಾಗಿದ್ದು, ಭೀಮಾವರಂ, ಪಾಲಕೋಲ್ಲು, ತನುಕು ಹಾಗೂ ನರಸಾಪುರಂ ಪಟ್ಟಣಗಳ ಪ್ರಮುಖ ಜಂಕ್ಷನ್‌ಗಳು ಜಲಾವೃತವಾಗಿವೆ. ಭೀಮಾವರಂ ಬಸ್ ನಿಲ್ದಾಣದ ಒಳಗೆ ಮೊಣಕಾಲು ಮಟ್ಟದಷ್ಟು ನೀರು ನಿಂತಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಗುಂಟೂರು, ಪಲ್ನಾಡು ಮತ್ತು ಬಾಪಟ್ಲ ಜಿಲ್ಲೆಗಳಲ್ಲೂ ತೊರೆ, ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಎನ್‌ಡಿಆರ್‌ಎಫ್ (NDRF) ತಂಡಗಳು ರಕ್ಷಣಾ ಕಾರ್ಯ ಹಾಗೂ ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿವೆ.
#MurasuCyclone #AndhraPradeshRains #Ongole #GunturNews #KrishnaDistrict #Udayakala #KarnatakaNews #WeatherUpdate #NaturalDisaster

