Wednesday, November 04, 2026
Menu

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು  ಕೂಡಲೇ ‘ನಮೂನೆ 6’ ಸಲ್ಲಿಸಿ: ಚುನಾವಣಾ ಆಯೋಗ ಸ್ಪಷ್ಟನೆ!

ಉದಯಕಾಲ ನ್ಯೂಸ್, ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ನಾಗರಿಕರು ಯಾವುದೇ ಹಿಂಜರಿಕೆಯಿಲ್ಲದೆ ಹೊಸದಾಗಿ ‘ನಮೂನೆ 6’ (Form 6) ಅರ್ಜಿಯನ್ನು ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ (ECI) ಸ್ಪಷ್ಟಪಡಿಸಿದೆ. ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಕರಡಿನಲ್ಲಿ ಕೈಬಿಟ್ಟುಹೋಗಿರುವ ಕಾರಣದಿಂದ ಮರು ಅರ್ಜಿ ಸಲ್ಲಿಸುವವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಆಯೋಗವು ಅಧಿಕೃತವಾಗಿ ಅಭಯ ನೀಡಿದೆ.

ಸುಳ್ಳು ಘೋಷಣೆಯ ಭೀತಿ ಬೇಡ: ಕಾನೂನು ಕ್ರಮದ ಆತಂಕಕ್ಕೆ ತೆರೆ

ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿದ್ದವರು ಮತ್ತೊಮ್ಮೆ ನಮೂನೆ 6 ಸಲ್ಲಿಸಿದರೆ, ಅದು ಜನತಾ ಪ್ರಾತಿನಿಧ್ಯ ಕಾಯಿದೆ-1950ರ ಸೆಕ್ಷನ್ 31ರ ಅಡಿ ಸುಳ್ಳು ಮಾಹಿತಿ ನೀಡಿದಂತಾಗಿ ಕಾನೂನು ಕ್ರಮಕ್ಕೆ ಗುರಿಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿತ್ತು. ಈ ಅನುಮಾನವನ್ನು ಸ್ಪಷ್ಟಪಡಿಸಿರುವ ಚುನಾವಣಾ ಆಯೋಗ, 2022ರ ಆಗಸ್ಟ್ 1ರಿಂದ ಜಾರಿಯಲ್ಲಿರುವ ನಮೂನೆ 6ರ ಘೋಷಣಾ ಪತ್ರವು ಕೇವಲ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ತಿಳಿಸಿದೆ. ಅರ್ಜಿದಾರರು ಹಿಂದೆಯೂ ನೋಂದಾಯಿತರಾಗಿದ್ದರು ಎಂಬ ಕಾರಣಕ್ಕಾಗಿಯೇ ಈ ಅರ್ಜಿಯನ್ನು ಸುಳ್ಳು ಘೋಷಣೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಆಯೋಗವು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಖಚಿತಪಡಿಸಿದೆ.

ಚುನಾವಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಮತ್ತು ವ್ಯಾಪಕ ಪ್ರಚಾರಕ್ಕೆ ಸೂಚನೆ

ಅರ್ಜಿದಾರರು ಈಗಾಗಲೇ ಬೇರೆ ಯಾವುದೇ ಸಂಸದೀಯ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿಲ್ಲದಿರುವ ವರೆಗೆ ಮತ್ತು ಅವರ ಘೋಷಣೆಯು ಕಾನೂನುಬದ್ಧವಾಗಿರುವವರೆಗೆ ಈ ಕಾನೂನು ರಕ್ಷಣೆಯು ಸಂಪೂರ್ಣವಾಗಿ ಅನ್ವಯಿಸುತ್ತದೆ. ಮತದಾರರು ಹಿಂದೆ ಹೆಸರನ್ನು ಹೊಂದಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಥವಾ ನಂತರ ನಮೂನೆ 6 ಸಲ್ಲಿಸಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಯಾವುದೇ ಚುನಾವಣಾ ನೋಂದಣಿ ಅಧಿಕಾರಿಗಳು ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಹಿತಾಸಕ್ತಿ ಹಾಗೂ ಗೊಂದಲ ನಿವಾರಣೆಗಾಗಿ ಈ ಮಹತ್ವದ ಮಾಹಿತಿಯನ್ನು ಸ್ಥಳೀಯ ಭಾಷೆಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡುವಂತೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಇಸಿಐ ನಿರ್ದೇಶಿಸಿದೆ.

#ElectionCommission #VoterList #Form6 #SIRProcess #Udayakala #KarnatakaNews #IndianElections #VoterRegistration

Related Posts

Leave a Reply

Your email address will not be published. Required fields are marked *