Tuesday, November 03, 2026
Menu

ನವೆಂಬರ್ 5 ಗುರುವಾರದಿಂದಲೇ ಹೊಸ ಬಸ್‌ ಟಿಕೆಟ್ ದರ ಜಾರಿ

ಉದಯಕಾಲ ನ್ಯೂಸ್‌, ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆಯ ಬಿಸಿ ಆರುವ ಮುನ್ನವೇ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಈ ವಾರವೇ ರಾಜ್ಯದ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳವಾಗುವುದು ಖಚಿತಗೊಂಡಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ.
ನಾಳೆಯೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ನವೆಂಬರ್ 5ರ ಗುರುವಾರದಿಂದಲೇ ಪರಿಷ್ಕೃತ ಟಿಕೆಟ್ ದರಗಳು ರಾಜ್ಯಾದ್ಯಂತ ಜಾರಿಗೆ ಬರುವ ನಿರೀಕ್ಷೆಯಿದೆ. ಈ ನಿರ್ಧಾರದಿಂದಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಪ್ರತಿ ಸ್ಟೇಜಿಗೆ 10 ರೂ. ಹೆಚ್ಚಳ ಸಾಧ್ಯತೆ

ಬಸ್ ಪ್ರಯಾಣ ದರ ಏರಿಕೆಯ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲು ಹಾಗೂ ದರದ ಪ್ರಮಾಣವನ್ನು ನಿರ್ಧರಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಉನ್ನತಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ KSRTC, BMTC, NWKRTC ಹಾಗೂ KKRTC ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ವಿಭಾಗದ ಅಧಿಕಾರಿಗಳು ಮತ್ತು ಕಾರ್ಯಾಚರಣೆ ಮುಖ್ಯಸ್ಥರು ಭಾಗವಹಿಸಿ ಅಂತಿಮ ಒಪ್ಪಿಗೆ ನೀಡಲಿದ್ದಾರೆ. ಪ್ರಸ್ತಾವನೆಯ ಪ್ರಕಾರ, ಬಿಎಂಟಿಸಿ ನಗರ ಸಾರಿಗೆಯಲ್ಲಿ ಪ್ರತಿ 2 ಕಿ.ಮೀ.ಗೆ ಇದ್ದ ಕನಿಷ್ಠ 6 ರೂ. ದರವನ್ನು 10 ರೂ.ಗೆ ಹಾಗೂ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲೂ ಪ್ರತಿ ಹಂತಕ್ಕೆ 10 ರೂ.ಗೆ ಏರಿಸುವ ಸಾಧ್ಯತೆಯಿದೆ. ಹಾಗೆಯೇ ಎಕ್ಸ್‌ಪ್ರೆಸ್ ಬಸ್‌ಗಳ ದರವನ್ನು 15 ರೂ. ಅಥವಾ 18 ರೂ.ಗೆ ಪರಿಷ್ಕರಿಸಲು ಚಿಂತಿಸಲಾಗಿದೆ.

ದರ ಏರಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಾರಿಗೆ ಇಲಾಖೆ, ಕಳೆದ 11 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳ ಟಿಕೆಟ್ ದರವನ್ನು ಕೇವಲ ಒಂದು ಬಾರಿ ಮಾತ್ರ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಈ ಸುದೀರ್ಘ ಅವಧಿಯಲ್ಲಿ ಕೇಂದ್ರ ಸರ್ಕಾರವು ನಿರಂತರವಾಗಿ ಡೀಸೆಲ್ ಬೆಲೆಗಳನ್ನು ಏರಿಸಿದ್ದು, ವಾಹನಗಳ ಬಿಡಿಭಾಗಗಳು ಹಾಗೂ ನಿರ್ವಹಣಾ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿವೆ. ಇದರಿಂದ ನಿಗಮಗಳ ಮೇಲೆ ತೀವ್ರ ಆರ್ಥಿಕ ಹೊರೆ ಬಿದ್ದಿದ್ದು, ಸಂಸ್ಥೆಗಳ ಉಳಿವಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುತ್ತಿರುವ ‘ಶಕ್ತಿ ಯೋಜನೆ’ಯ ಮೊತ್ತವನ್ನು ಸರ್ಕಾರವು ನಿಗಮಗಳಿಗೆ ಕಾಲಕಾಲಕ್ಕೆ ಮರುಪಾವತಿಸುತ್ತಿರುವುದರಿಂದ ನಷ್ಟಕ್ಕೂ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಇಲಾಖೆ ತಿಳಿಸಿದೆ. ದರ ಪರಿಷ್ಕರಣಾ ಸಮಿತಿಯ ಶಿಫಾರಸಿನಂತೆ ಸಂಪೂರ್ಣ ದರವನ್ನು ವಿಧಿಸಿದರೆ ಜನರಿಗೆ ಅತಿ ಹೆಚ್ಚಿನ ಹೊರೆಯಾಗಲಿದೆ ಎಂಬ ಕಾರಣಕ್ಕೆ, ಸಾರ್ವಜನಿಕರಿಗೆ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಹಂತ ಹಂತವಾಗಿ ಕಡಿಮೆ ಪ್ರಮಾಣದಲ್ಲಿ ಮಾತ್ರ ದರ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

#BusFareHike #KSRTC #BMTC #KarnatakaTransport #GruhaJyothi #ShaktiScheme #UdayakalaNews #KarnatakaPolitics

Related Posts

Leave a Reply

Your email address will not be published. Required fields are marked *