ಉದಯಕಾಲ ನ್ಯೂಸ್, ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯ ಜನನಿಬಿಡ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ‘ಹೋಟೆಲ್ ಬಿಲಾಸ್ ಇನ್’ನಲ್ಲಿ ಸೋಮವಾರ ರಾತ್ರಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಘನಕಾಂತ ಗೊಗೊಯ್ (Ghanakanta Gogoi) ಎಂಬಾತನನ್ನು ಬಂಧಿಸಿದ್ದಾರೆ.
ಗುವಾಹಟಿಯ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಜಿ.ಎಸ್. ರಸ್ತೆಯ ಬೋರಾ ಸರ್ವಿಸ್ ಬಳಿಯಿರುವ ‘ಹೋಟೆಲ್ ಬಿಲಾಸ್ ಇನ್’ ನಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಈ ದಾಳಿ ಸಂಭವಿಸಿದೆ. ಒಟ್ಟು ಆರು ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದರು. ಅವರ ಪೈಕಿ ಐವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಹೋಟೆಲ್ ಮಾಲೀಕರ ಕುಟುಂಬದವರಾಗಿದ್ದರೆ, ಮತ್ತೊಬ್ಬರು ಹಾಗೂ ಗಾಯಗೊಂಡವರು ಹೋಟೆಲ್ ಮಾಲೀಕರ ಗ್ರಾಮದವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಗುವಾಹಟಿ ನಗರ ಪೊಲೀಸರು, ಪ್ರಮುಖ ಆರೋಪಿ ಘನಕಾಂತ ಗೊಗೊಯ್ನನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾದ ಪರವಾನಗಿ ಹೊಂದಿರುವ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಗುತ್ತಿಗೆ ವಿವಾದ ಹತ್ಯೆಗೆ ಕಾರಣ!
ಈ ಕುರಿತು ಮಾಹಿತಿ ನೀಡಿರುವ ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ, ಪ್ರಾಥಮಿಕ ತನಿಖೆಯ ಪ್ರಕಾರ ವ್ಯವಹಾರಕ್ಕೆ ಹಾಗೂ ಹೋಟೆಲ್ ಗುತ್ತಿಗೆಗೆ (Lease) ಸಂಬಂಧಿಸಿದ ವಿವಾದವೇ ಈ ಭೀಕರ ಗುಂಡಿನ ದಾಳಿಗೆ ಕಾರಣವಾಗಿದೆ ಎಂದು ಖಚಿತಪಡಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಈ ಹೋಟೆಲ್ ಅನ್ನು ಘನಕಾಂತ ಗೊಗೊಯ್ಗೆ ಗುತ್ತಿಗೆಗೆ ನೀಡಲಾಗಿತ್ತು. ಈ ಗುತ್ತಿಗೆಯ ವಿಷಯಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರು ಮತ್ತು ಗೊಗೊಯ್ ನಡುವೆ ಕೆಲಕಾಲದಿಂದ ತೀವ್ರ ಸಂಘರ್ಷವಿತ್ತು ಎಂದು ತಿಳಿದುಬಂದಿದೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಅಸ್ಸಾಂನಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಯ ವಿಚಾರವಾಗಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸ್ಸೋಂ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ‘ಎಕ್ಸ್’ (X) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದು, ಕೂಡಲೇ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.
#GuwahatiShooting #AssamNews #BilasInn #UdayakalaNews #CrimeNews #GuwahatiPolice #HimantaBiswaSarma #LawAndOrder #AssamCongress


