ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ ಪರಂಪರೆ ಮತ್ತು ಪ್ರವಾಸಿ ವೈವಿಧ್ಯತೆಯನ್ನು ದೇಶ-ವಿದೇಶಿ ಪ್ರವಾಸಿಗರಿಗೆ ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ನ (Golden Chariot) 2026–27ರ ಪ್ರವಾಸಿ ಋತುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಧಿಕೃತ ಚಾಲನೆ ನೀಡಿದರು.
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ‘Pride of Karnataka’ ಸೇರಿದಂತೆ ಹೊಸ ಯಾತ್ರಾ ಮಾರ್ಗಗಳನ್ನು ರೂಪಿಸಲಾಗಿದ್ದು, ಐಷಾರಾಮಿ ಪ್ರವಾಸಿಗರಿಗೆ ಅತ್ಯುತ್ತಮ ಸೇವೆ ಒದಗಿಸಲು ವಿಶೇಷ ಗಮನ ಹರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರೈಲಿನ ವಿಶೇಷತೆಗಳು ಹಾಗೂ ಆತಿಥ್ಯ
ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಪ್ರತ್ಯೇಕ ಅತಿಥಿ ಕೊಠಡಿಗಳು, ಅತ್ಯಾಕರ್ಷಕ ಊಟದ ಬೋಗಿಗಳು, ಸ್ಪಾ ಹಾಗೂ ನಾನಾ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲಿನೊಳಗಿನ ಆರಾಮದಾಯಕ ಪ್ರಯಾಣದ ಜೊತೆಗೆ ಪ್ರತಿ ನಿಲ್ದಾಣದಲ್ಲೂ ಸ್ಥಳೀಯ ಸಂಸ್ಕೃತಿಯ ಅನಾವರಣಕ್ಕೆ ಒತ್ತು ನೀಡಲಾಗಿದೆ.ಈ ಬಾರಿಯ ಮೊದಲ ಯಾತ್ರೆಯಲ್ಲಿ 75 ಅತಿಥಿಗಳು ಭಾಗವಹಿಸಿದ್ದು, ಸುಮಾರು 60 ಸಿಬ್ಬಂದಿ ರೈಲಿನಲ್ಲಿ ಆತಿಥ್ಯ ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದ್ದಾರೆ.
ಪ್ರತಿ ನಿಲ್ದಾಣದಲ್ಲೂ ವಿಶಿಷ್ಟ ಅನುಭವ
| ಯಾತ್ರೆಯ ಹೆಸರು (Tour Name) | ಅವಧಿ (Duration) | ಪ್ರಮುಖ ಮಾರ್ಗಗಳು (Route) |
| Pride of Karnataka | 5 ರಾತ್ರಿ / 6 ದಿನಗಳು | ಬೆಂಗಳೂರು – ಬಂಡೀಪುರ – ಮೈಸೂರು – ಹಳೇಬೀಡು – ಚಿಕ್ಕಮಗಳೂರು – ಹಂಪಿ – ಗೋವಾ – ಬೆಂಗಳೂರು |
| Jewels of South | 5 ರಾತ್ರಿ / 6 ದಿನಗಳು | ಬೆಂಗಳೂರು – ಮೈಸೂರು – ಹಂಪಿ – ಮಹಾಬಲಿಪುರಂ – ತಂಜಾವೂರು – ಚೆಟ್ಟಿನಾಡು – ಕೊಚ್ಚಿ – ಕುಮಾರಕೋಂ – ಬೆಂಗಳೂರು |
| Glimpses of Karnataka | 3 ರಾತ್ರಿ / 4 ದಿನಗಳು | ಬೆಂಗಳೂರು – ಬಂಡೀಪುರ – ಮೈಸೂರು – ಹಂಪಿ – ಬೆಂಗಳೂರು |
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ಮೂಲಕ ನೈಸರ್ಗಿಕ ಸಂಪತ್ತಿನ ಪರಿಚಯವಾದರೆ,ಮೈಸೂರಿನಲ್ಲಿ ಅರಮನೆಯ ರಾಜವೈಭವ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದ ಸೊಬಗನ್ನ ಕಣ್ಣು ತುಂಬಿಕೊಳ್ಳಬಹುದು. ಹೊಯ್ಸಳರ ಕಾಲದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಪರಂಪರೆಯ ವೀಕ್ಷಣೆಗೆ ಬೇಲೂರು ಹಳೇಬೀಡು ತಕ್ಕ ಸ್ಥಳವಾಗಿದೆ.ಚಿಕ್ಕಮಗಳೂರು ಕಾಫಿ ತೋಟಗಳಿಗೆ ಭೇಟಿ ನೀಡಿ ಮಲೆನಾಡಿನ ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವುದು. ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿಯ ಸ್ಮಾರಕಗಳ ಮಾರ್ಗದರ್ಶಿತ ವೀಕ್ಷಣೆ ಮಾಡಬಹುದಾಗಿದೆ.ನಂತರ, ಗೋವಾ ಭೇಟಿ ನೀಡಿ ಐತಿಹಾಸಿಕ ಚರ್ಚುಗಳು ಮತ್ತು ಕರಾವಳಿ ಪರಂಪರೆಯ ಅನುಭವ ಪಡೆಯಬಹುದಾಗಿದೆ.
ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮವೇ ಪ್ರಮುಖ ಅಸ್ತ್ರ
ಪ್ರವಾಸೋದ್ಯಮವನ್ನು ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಪ್ರಸಿದ್ಧ ತಾಣಗಳ ಜೊತೆಗೆ ಹೊಸ ಪ್ರದೇಶಗಳನ್ನು ಮ್ಯಾಪ್ ಮಾಡಿ ಪರಿಚಯಿಸುವುದರಿಂದ ಸ್ಥಳೀಯ ಮಟ್ಟದಲ್ಲಿ ಆರ್ಥಿಕ ಅವಕಾಶಗಳು ಹೆಚ್ಚಲಿವೆ ಎಂದರು.
ಮುಂದಿನ ಹಂತದಲ್ಲಿ ತಾಣಾಧಾರಿತ ಅನುಭವ ಮತ್ತು ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕದ ಪ್ರವಾಸೋದ್ಯಮವನ್ನು ವಿಸ್ತರಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವೆಬ್‌ಸೈಟ್: www.goldenchariot.org ಇಮೇಲ್: pd@goldenchariot.org / arketing@kstdc.co, ದೂರವಾಣಿ: +91 89706 50010
#GoldenChariot #CMDKShivakumar #KarnatakaTourism #LuxuryTrain #PrideOfKarnataka #UdayakalaNews #TravelKarnataka #KSTDC #TourismNews

