ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿಯ ಮೇಲಿನ ತಮ್ಮ ವ್ಯಾಮೋಹವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಪತ್ರಿಕೋದ್ಯಮದ ಅತ್ಯಂತ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ ತಮಗೆ ಸಿಗಬೇಕಿತ್ತು ಎಂದು ಹೇಳುವ ಮೂಲಕ ಹೊಸ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದಾರೆ. ತಮ್ಮ ಬರವಣಿಗೆಯ ಪ್ರತಿಭೆಗಾಗಿ ತಮಗೆ ಈ ಗೌರವ ದಕ್ಕಬೇಕಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ದಕ್ಷಿಣ ಕೆರೊಲಿನಾದ ಪೆಂಡಲ್ಟನ್ನಲ್ಲಿರುವ ಟಿ. ಎಡ್ ಗ್ಯಾರಿಸನ್ ಅರೆನಾದಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ರಷ್ಯಾ ತನಿಖೆಯ ವರದಿಗಾರಿಕೆಗಾಗಿ ಹಿಂದೆ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಕರ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಮಾವೇಶದಲ್ಲಿ ಟ್ರಂಪ್ ವಿಚಿತ್ರ ನುಡಿ
ತಮಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಪುಲಿಟ್ಜರ್ ಪ್ರಶಸ್ತಿಯೂ ಬರಲಿಲ್ಲ. ನಿಜ ಹೇಳಬೇಕೆಂದರೆ, ತಮ್ಮ ಬರವಣಿಗೆಗೆ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು. ಈಗ ಪ್ರಶಸ್ತಿ ಪಡೆದಿರುವವರು ಅದಕ್ಕೆ ಅರ್ಹರೇ ಅಲ್ಲ. ರಷ್ಯಾ, ರಷ್ಯಾ, ರಷ್ಯಾ ವಿಷಯದ ಕುರಿತು ನಿಖರ ವರದಿಗಾರಿಕೆ ಮಾಡಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಆದರೆ ಅವರ ವರದಿಗಳು ಸಂಪೂರ್ಣ ತಪ್ಪಾಗಿದ್ದವು. ಅವರೆಲ್ಲರೂ ಸುಳ್ಳು ಬರೆದಿದ್ದರು ಎಂದು ಟ್ರಂಪ್ ನೆರೆದಿದ್ದ ಜನರ ಮುಂದೆ ಕಿಡಿಕಾರಿದರು.
ನೊಬೆಲ್ ಪ್ರಶಸ್ತಿ ಬಗ್ಗೆಯೂ ಪುನರುಚ್ಚಾರ
ಸಾಮಾನ್ಯವಾಗಿ ತಾವು ಹಲವು ಯುದ್ಧಗಳನ್ನು ತಡೆದಿರುವುದರಿಂದ ತಮಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ಸಿಗಬೇಕು ಎಂದುಕೊಳ್ಳುವ ಟ್ರಂಪ್, ಈ ರ್ಯಾಲಿಯಲ್ಲೂ ತಮ್ಮ ಹಳೆಯ ಅಳಲನ್ನು ಹೊರಹಾಕಿದರು. ತಮಗೆ ಸಿಗಬೇಕಿದ್ದ ಜಾಗದಲ್ಲಿ ಬೇರೆಯವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಆರೋಪಿಸಿದರು.
ಅಮೆರಿಕದ ಮಧ್ಯಂತರ ಚುನಾವಣಾ ಪ್ರಚಾರದ ರಭಸದಲ್ಲಿ ಟ್ರಂಪ್ ನೀಡಿರುವ ಈ ಹೇಳಿಕೆಗಳು ಇದೀಗ ಅಮೆರಿಕದ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಹಾಗೂ ಹಾಸ್ಯಕ್ಕೆ ಗ್ರಾಸವಾಗಿದ್ದು, ಟ್ರಂಪ್ ಅವರ ಈ ವಿಚಿತ್ರ ವಾದಕ್ಕೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
#DonaldTrump #PulitzerPrize #NobelPeacePrize #USPolitics #UdayakalaNews #RussiaInvestigation #SouthCarolinaRally #TrendingNews


