ಪ್ಯಾರಿಸ್: ಯುರೋಪಿನ ಪ್ರಮುಖ ರಾಷ್ಟ್ರವಾದ ಫ್ರಾನ್ಸ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಭುಗಿಲೆದ್ದಿರುವ ತೀವ್ರ ಪ್ರತಿಭಟನೆಗಳು ಹಾಗೂ ಹಿಂಸಾಚಾರದ ಹಿಂದೆ ಬೃಹತ್ ಅಂತರರಾಷ್ಟ್ರೀಯ ಸಂಘಟನೆಗಳ ಜಾಲವಿರುವುದು ಅಮೆರಿಕದ ಖ್ಯಾತ ಮಾಧ್ಯಮ ವರದಿಯೊಂದರಿಂದ ಬಹಿರಂಗಗೊಂಡಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಆರಂಭವಾದ ಈ ಚಳವಳಿಯು ಈಗ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ಜಾಗತಿಕ ಎಡಪಂಥೀಯ ಸಂಘಟನೆಗಳ ಸಂಯೋಜಿತ ಸಂಚು ಅಡಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ ಈ ಜಾಲದ ನಂಟು ಭಾರತದವರೆಗೂ ವ್ಯಾಪಿಸಿರುವ ಬಗ್ಗೆ ‘ಫಾಕ್ಸ್ ನ್ಯೂಸ್’ ತನ್ನ ವರದಿಯಲ್ಲಿ ಸ್ಫೋಟಕ ಮಾಹಿತಿಯನ್ನು ಹೊರಹಾಕಿದೆ.
50ಕ್ಕೂ ಹೆಚ್ಚು ಸಂಘಟನೆಗಳ ಸಂಘಟಿತ ಜಾಲ
ಫ್ರಾನ್ಸ್ನಲ್ಲಿ ಕೆಲಕಾಲದಿಂದ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಸುಮಾರು 50ಕ್ಕೂ ಅಧಿಕ ಸಂಘಟನೆಗಳ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆ ಎಂದು ಫಾಕ್ಸ್ ನ್ಯೂಸ್ ಡಿಜಿಟಲ್ ವರದಿ ಮಾಡಿದೆ. ಈ ಜಾಲದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳಿದ್ದರೆ, ಉಳಿದ 35ಕ್ಕೂ ಹೆಚ್ಚು ಸಂಘಟನೆಗಳು ಕಾರ್ಮಿಕ ಸಂಘಗಳು, ಕಮ್ಯುನಿಸ್ಟ್ ಹಾಗೂ ಸಮಾಜವಾದಿ ಗುಂಪುಗಳು, ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳನ್ನು ಒಳಗೊಂಡಿವೆ.
ಆರಂಭದಲ್ಲಿ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿಗಳು, ನಂತರದ ದಿನಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆ ವಿರೋಧ, ಸರ್ಕಾರಿ ವೆಚ್ಚ ಕಡಿತ, ಪೊಲೀಸ್ ಸುಧಾರಣೆ ಹಾಗೂ ಇಸ್ರೇಲ್ ಪರ-ವಿರೋಧ ನೀತಿಗಳಂತಹ ಜಾಗತಿಕ ರಾಜಕೀಯ ವಿಚಾರಗಳನ್ನೂ ಮುನ್ನೆಲೆಗೆ ತಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಅಂತರರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಂಡು ಪ್ರತಿಭಟನೆಗಳನ್ನು ಜಾಗತಿಕ ಮಟ್ಟದಲ್ಲಿ ವೈಭವೀಕರಿಸುವುದು ಈ ಸಂಘಟನೆಗಳ ಮುಖ್ಯ ಕಾರ್ಯವಾಗಿದೆ ಎನ್ನಲಾಗಿದೆ.
ಅಮೆರಿಕದಿಂದ ಭಾರತದವರೆಗೆ ವಿಸ್ತರಿಸಿದ ನಂಟು
ಈ ಜಾಗತಿಕ ಪ್ರತಿಭಟನಾ ಜಾಲದ ಪ್ರಭಾವ ಕೇವಲ ಫ್ರಾನ್ಸ್ಗೆ ಮಾತ್ರ ಸೀಮಿತವಾಗಿಲ್ಲದೆ, ಅಮೆರಿಕ, ಬ್ರಿಟನ್, ಗ್ರೀಸ್, ಬ್ರೆಜಿಲ್ ಹಾಗೂ ಭಾರತದಲ್ಲೂ ಇದರ ಪ್ರಭಾವವಿರುವ ಸಂಘಟನೆಗಳು ಸಕ್ರಿಯವಾಗಿವೆ ಎಂದು ವರದಿ ತಿಳಿಸಿದೆ. ಪ್ರಮುಖವಾಗಿ, ಫ್ರಾನ್ಸ್ನಲ್ಲಿರುವ ‘ಇಂಡಿಯನ್ ಅಲಯನ್ಸ್ ಪ್ಯಾರಿಸ್’ (Indian Alliance Paris) ಎಂಬ ಸಂಘಟನೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರನ್ನು ಒಳಗೊಂಡಿರುವ ಈ ಸಂಘಟನೆ, ಫ್ರಾನ್ಸ್ ಗಲಭೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ವ್ಯಕ್ತಪಡಿಸಿದೆ.
ಅಲ್ಲದೆ, ಫ್ರಾನ್ಸ್ ಮತ್ತು ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹಾಗೂ ಯುವಜನರ ಪ್ರತಿಭಟನೆಗಳನ್ನು ಪರಸ್ಪರ ಹೋಲಿಕೆ ಮಾಡಿ ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು. ಅಕ್ಟೋಬರ್ 6ರಂದು ಭಾರತದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದ ವಿಡಿಯೋ ತುಣುಕನ್ನು ಹಾಗೂ ಅಕ್ಟೋಬರ್ 7ರಂದು ಭಾರತದ ರಾಜಕೀಯ ಬೆಳವಣಿಗೆಗಳು ಮತ್ತು ವಿರೋಧ ಪಕ್ಷಗಳ ಬಂಧನದ ಕುರಿತ ಸುದ್ದಿಯ ತುಣುಕುಗಳನ್ನು ಈ ಸಂಘಟನೆ ಪ್ರಕಟಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಭಾರತದ ಆಂತರಿಕ ರಾಜಕೀಯ ವಿದ್ಯಮಾನಗಳಿಗೂ ಫ್ರಾನ್ಸ್ನ ಪ್ರತಿಭಟನಾ ಜಾಲಕ್ಕೂ ಲಿಂಕ್ ಮಾಡಲು ಪ್ರಯತ್ನಿಸಲಾಗಿದೆ ಎಂಬ ಅಂಶ ಮುನ್ನೆಲೆಗೆ ಬಂದಿದೆ.
ಹಿಂಸಾಚಾರವನ್ನು ಖಂಡಿಸಿದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರದ ಹಾದಿ ಹಿಡಿದಿರುವುದಕ್ಕೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿರುವುದಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದೇ ಕಾರಣಕ್ಕೂ ಹಿಂಸೆಯನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಲೆ ಏರಿಕೆ ಮತ್ತು ಶಿಕ್ಷಣ ಕ್ಷೇತ್ರದ ಬೇಡಿಕೆಗಳ ಮುಖವಾಡದಡಿ ಕೆಲವರು ಮಳಿಗೆಗಳನ್ನು ಲೂಟಿ ಮಾಡುತ್ತಿರುವುದು ಹಾಗೂ ಸಾರ್ವಜನಿಕ ಕಟ್ಟಡಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ ಎಂದು ಮ್ಯಾಕ್ರನ್ ಎಚ್ಚರಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಡಪಂಥೀಯ ಸಂಘಟನೆಗಳು ಸ್ಥಳೀಯ ಸಮಸ್ಯೆಗಳನ್ನು ಬಳಸಿಕೊಂಡು ಆಯಾ ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವ ಈ ವರದಿ ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
#FranceProtests #EmmanuelMacron #FoxNewsReport #GlobalLeftNetwork #RahulGandhi #IndianAllianceParis #InternationalNews #UdayakalaNews #ParisRiots #WorldNews


