Menu

40 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ: ಹೊಸಕೋಟೆಯಲ್ಲಿ ಗೋಪಾಲನ್ ಏರೋಸ್ಪೇಸ್‌ನಿಂದ ಉತ್ಪಾದನಾ ಘಟಕ ಆರಂಭ!

ಉದಯಕಾಲ ನ್ಯೂಸ್, ಬೆಂಗಳೂರು: ದೇಶದ ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಗೋಪಾಲನ್ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯಾದ ‘ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (GAIPL), ಬೆಂಗಳೂರಿನ ಹೊಸಕೋಟೆಯಲ್ಲಿರುವ ತನ್ನ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಇಂದು ಹೊಸ ಉತ್ಪಾದನಾ ಸಾಲಿಗೆ ಅಧಿಕೃತ ಚಾಲನೆ ನೀಡಿದೆ. ಈ ಮಹತ್ವದ ಹೆಜ್ಜೆಯು ಏರೋಸ್ಪೇಸ್, ರಕ್ಷಣಾ ಮತ್ತು ಬಾಹ್ಯಾಕಾಶ (Aerospace & Defence) ಕ್ಷೇತ್ರಗಳಲ್ಲಿ ಉನ್ನತ ಮೌಲ್ಯದ ಉತ್ಪಾದನಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕಂಪನಿಯ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಲಿದೆ.

ಪ್ರಮುಖ ಐದು ಒಪ್ಪಂದಗಳು

ಹೊಸ ಉತ್ಪಾದನಾ ಸಾಲಿನ ಉದ್ಘಾಟನಾ ಸಮಾರಂಭವು ಚೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಹಾಗೂ ಕೈಗಾರಿಕೆ ಮತ್ತು ವ್ಯಾಪಾರ ಸಚಿವರಾದ ಕಾರೆಲ್ ಹಾವ್ಲಿಚೆಕ್ (Karel Havlicek) ಹಾಗೂ ಗೋಪಾಲನ್ ಎಂಟರ್‌ಪ್ರೈಸಸ್‌ನ ನಿರ್ದೇಶಕರಾದ ಸಿ. ಪ್ರಭಾಕರ್ ಅವರ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಈ ಐತಿಹಾಸಿಕ ಸಂದರ್ಭದಲ್ಲಿ ಗೋಪಾಲನ್ ಮತ್ತು ಚೆಕ್ ಗಣರಾಜ್ಯದ ಪ್ರಮುಖ ಪಾಲುದಾರ ಕಂಪನಿಗಳ ನಡುವೆ ಐದು ಪ್ರಮುಖ ಒಪ್ಪಂದಗಳಿಗೆ (MoU) ಅಧಿಕೃತವಾಗಿ ಸಹಿ ಹಾಕಲಾಯಿತು.ಈ ಒಪ್ಪಂದಗಳ ಪ್ರಮುಖ ವ್ಯಾಪ್ತಿಗಳು ಇಂತಿವೆ:

* ಅಗ್ನಿಶಾಮಕ ತಂತ್ರಜ್ಞಾನ ಹಾಗೂ ಪರಿಹಾರಗಳು.
* ಸ್ಥಿರ-ರೆಕ್ಕೆಯ ಡ್ರೋನ್‌ಗಳು, ಕ್ವಾಡ್‌ಕಾಪ್ಟರ್‌ಗಳು ಮತ್ತು ಸಂಬಂಧಿತ ಮಾನವರಹಿತ ವೈಮಾನಿಕ ವಾಹನಗಳು (UAVs).
* ಥರ್ಮೋರೆಫ್ಲೆಕ್ಟಿವ್ ಕೋಟಿಂಗ್ ತಂತ್ರಜ್ಞಾನ.
* ಮಾನವರಹಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳು (UTM).
* ಜೆಟ್ ಚಾಲಿತ ಮಾನವರಹಿತ ವೈಮಾನಿಕ ವಾಹನಗಳ ಅಭಿವೃದ್ಧಿ.

ಈ ಒಪ್ಪಂದಗಳು ಉಭಯ ದೇಶಗಳ ನಡುವಿನ ಕೈಗಾರಿಕಾ ಸಹಕಾರವನ್ನು ವೃದ್ಧಿಸುವುದಲ್ಲದೆ, ಭವಿಷ್ಯದ ಸುಧಾರಿತ ಎಂಜಿನಿಯರಿಂಗ್ ಹಾಗೂ ರಕ್ಷಣಾ ತಂತ್ರಜ್ಞಾನಗಳಿಗೆ ಬಲವಾದ ಅಡಿಪಾಯ ಹಾಕಿಕೊಡಲಿವೆ.

10.5 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಘಟಕ ಹಾಗೂ ಜಾಗತಿಕ ಪಾಲುದಾರಿಕೆ

ಹೊಸಕೋಟೆಯಲ್ಲಿರುವ 10.5 ಎಕರೆ ವಿಸ್ತೀರ್ಣದ GAIPL ಉತ್ಪಾದನಾ ಘಟಕದಲ್ಲಿ ಕಂಪನಿಯು ಸುಮಾರು 40 ಮಿಲಿಯನ್ ಅಮೆರಿಕನ್‌ ಡಾಲರ್ (ಅಂದಾಜು 330 ಕೋಟಿ ರೂ.) ಬಂಡವಾಳ ಹೂಡಿಕೆ ಮಾಡಿದೆ. ಈ ಘಟಕವು 1,50,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಅತ್ಯಾಧುನಿಕ ಉತ್ಪಾದನಾ ಮೂಲಸೌಕರ್ಯವನ್ನು ಹೊಂದಿದೆ.

ಕಂಪನಿಯು ನಿಖರವಾದ CNC ಯಂತ್ರೋಪಕರಣ ಸಂಸ್ಕರಣೆ (Machining), ಶೀಟ್ ಮೆಟಲ್ ಫ್ಯಾಬ್ರಿಕೇಶನ್, ಸುಧಾರಿತ ಕಾಂಪೊಸಿಟ್‌ಗಳು, ಏರೋಸ್ಟ್ರಕ್ಚರ್‌ಗಳು ಮತ್ತು ಸಂಕೀರ್ಣ ಅಸೆಂಬ್ಲಿಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ‘ಬಿಲ್ಡ್-ಟು-ಪ್ರಿಂಟ್’ ಮತ್ತು ‘ಬಿಲ್ಡ್-ಟು-ಸ್ಪೆಕ್’ ಪರಿಹಾರಗಳನ್ನು ಒದಗಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ವಿಶಿಷ್ಠ ಗುರುತಿಸಿಕೊಂಡಿದೆ.

ಹೆಮ್ಮೆಯ ಗ್ರಾಹಕರ ಜಾಲ

GAIPL ಸಂಸ್ಥೆಯು AS9100D ಮತ್ತು ISO 9001:2015 ಪ್ರಮಾಣೀಕರಣಗಳನ್ನು ಹೊಂದಿದ್ದು, ಕಾಂಪೊಸಿಟ್‌ಗಳು ಮತ್ತು ವೆಲ್ಡಿಂಗ್ ಕ್ಷೇತ್ರಗಳಲ್ಲಿ ಪ್ರತಿಷ್ಠಿತ Nadcap ಮಾನ್ಯತೆಯನ್ನು ಪಡೆದಿದೆ. ಕಂಪನಿಯು ಈಗಾಗಲೇ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜೊತೆಗೆ HAL, IAI, L&T, DRDO, TASL, ISRO, NAL, Expleo ಮತ್ತು ECIL ಮುಂತಾದ ದೇಶದ ಮಹತ್ವದ ರಕ್ಷಣಾ ಹಾಗೂ ಬಾಹ್ಯಾಕಾಶ ಸಂಸ್ಥೆಗಳಿಗೆ ತನ್ನ ಸೇವೆಗಳನ್ನು ಒದಗಿಸುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾತ್ರ ವಿಸ್ತರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಗೋಪಾಲನ್ ಎಂಟರ್‌ಪ್ರೈಸಸ್‌ನ ನಿರ್ದೇಶಕರಾದ ಸಿ. ಪ್ರಭಾಕರ್ ಅವರು, “ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಕೇವಲ ಉತ್ಪಾದನಾ ಸಾಮರ್ಥ್ಯವೊಂದೇ ಸಾಲದು; ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಸಂಕೀರ್ಣ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿ ಪೂರೈಸುವ ಸಾಮರ್ಥ್ಯ ಬೇಕು. ಹೊಸಕೋಟೆಯ ಈ ಹೂಡಿಕೆಯು ಮೌಲ್ಯ ಸರಪಳಿಯಲ್ಲಿ ನಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲಿದೆ. ಕೇವಲ ಪೂರೈಕೆದಾರರಾಗಿರದೆ, ಜಾಗತಿಕ ರಕ್ಷಣಾ ದಿಗ್ಗಜರಿಗೆ ಕಾರ್ಯತಂತ್ರದ ಪಾಲುದಾರರಾಗುವುದು ನಮ್ಮ ಮುಖ್ಯ ಗುರಿಯಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
#GopalanAerospace #Hoskote #AERODEFENCE #MakeInIndia #UdayakalaNews #CzechRepublic #ISRO #DRDO #KarnatakaIndustry #DefenseManufacturingKannada

Related Posts

Leave a Reply

Your email address will not be published. Required fields are marked *