Menu

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ರಣಕಹಳೆ: ವಿಶೇಷ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ!

ಉದಯಕಾಲ ನ್ಯೂಸ್, ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಗಳು ತಣ್ಣಗಾಗುವ ಮುನ್ನವೇ, ಕೇಂದ್ರ ಸರ್ಕಾರವು ರಾಜಕೀಯವಾಗಿ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಹೆಜ್ಜೆಯೊಂದಕ್ಕೆ ಮುಂದಾಗಿದೆ. ದೇಶದ ಬಹುಕಾಲದ ಬೇಡಿಕೆಯಾದ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ (Women Reservation) ಮತ್ತು ಕ್ಷೇತ್ರ ಪುನರ್‌ವಿಂಗಡಣೆ (Delimitation) ಜಾರಿಗೆ ಸಂಬಂಧಿಸಿದ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಈ ತಿಂಗಳಾಂತ್ಯದಲ್ಲೇ ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದ್ದು, ಶೀಘ್ರವೇ ವಿಶೇಷ ಸಂಸತ್ ಅಧಿವೇಶನ ಕರೆಯುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಬಾರಿ ಕೈತಪ್ಪಿದ್ದ ಅವಕಾಶ, ಈ ಬಾರಿ ಬಲ ಹೆಚ್ಚಳ

ಕಳೆದ ಏಪ್ರಿಲ್ 17ರ ಬಜೆಟ್ ಅಧಿವೇಶನದಲ್ಲಿ ಇದೇ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಗತ್ಯ ಸಂಖ್ಯಾಬಲದ ಕೊರತೆಯಿಂದ ಮಂಡನೆ ವೇಳೆ ಹಿನ್ನಡೆ ಅನುಭವಿಸಿತ್ತು. ಆ ಸಂದರ್ಭದಲ್ಲಿ ಮಸೂದೆ ಪರವಾಗಿ 298 ಮತಗಳು ಬಿದ್ದರೆ, ವಿರುದ್ಧವಾಗಿ 230 ಮತಗಳು ಬಂದಿದ್ದವು. ಸಂವಿಧಾನ ತಿದ್ದುಪಡಿ ಕಾಯ್ದೆಗೆ ಮೂರನೇ ಎರಡರಷ್ಟು ಅಂದರೆ ಕನಿಷ್ಠ 352 ಸದಸ್ಯರ ಬೆಂಬಲ ಅಗತ್ಯವಿದ್ದ ಕಾರಣ ಮಸೂದೆ ಪಾಸಾಗಿರಲಿಲ್ಲ. ಕ್ಷೇತ್ರ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಜೋಡಿಸಿರುವುದನ್ನು ವಿರೋಧಿಸಿ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ನಂತರ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸಲು ತೀರ್ಮಾನಿಸಲಾಗಿದ್ದರೂ, ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಮತ್ತು ಸಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಈ ಮಹತ್ವದ ಮಸೂದೆಯನ್ನು ಮುಂದೂಡಲಾಗಿತ್ತು. ಆದರೆ, ಪ್ರಸ್ತುತ ರಾಜಕೀಯ ಸಮೀಕರಣಗಳು ಬದಲಾಗಿವೆ. ಮುಂಗಾರು ಅಧಿವೇಶನದ ಬಳಿಕ ತೃಣಮೂಲ ಕಾಂಗ್ರೆಸ್‌ನ (TMC) 20 ಸಂಸದರು ಹಾಗೂ ಶಿವಸೇನೆ (UBT) ಉದ್ದವ್ ಬಣದ 6 ಸಂಸದರು ಆಡಳಿತ ಪಕ್ಷದ ನಿರ್ಧಾರಗಳ ಪರ ಒಲವು ತೋರುತ್ತಿರುವುದು ಎನ್‌ಡಿಎ ಮೈತ್ರಿಕೂಟದ ಬಲವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರೊಂದಿಗೆ ತಮಿಳುನಾಡು ಚುನಾವಣಾ ಸಮೀಕರಣಗಳ ಹಿನ್ನೆಲೆಯಲ್ಲಿ ಇಂಡಿಯ ಒಕ್ಕೂಟದಿಂದ ಹೊರಬಂದಿರುವ ಡಿಎಂಕೆ (DMK) ಪಕ್ಷದೊಂದಿಗೂ ಕೇಂದ್ರ ಸರ್ಕಾರ ತೆರೆಮರೆಯ ಮಾತುಕತೆ ನಡೆಸುತ್ತಿದ್ದು, ಮಸೂದೆಗೆ ಒಮ್ಮತದ ಬೆಂಬಲ ಪಡೆಯಲು ರಣತಂತ್ರ ರೂಪಿಸಿದೆ.

ಮುಕ್ತಾಯಗೊಳ್ಳದ ಮುಂಗಾರು ಅಧಿವೇಶನ – ವಿಶೇಷ ಕಲಾಪಕ್ಕೆ ದಾರಿ

ಆಗಸ್ಟ್ 13 ರಂದು ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವನ್ನು ಕೇವಲ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆಯೇ ವಿನಃ, ಸಾಂವಿಧಾನಿಕವಾಗಿ ಅಧಿವೇಶನವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಅಧಿಸೂಚನೆ ಹೊರಡಿಸಿಲ್ಲ. ಈ ತಾಂತ್ರಿಕ ಅಂಶವು ಸರ್ಕಾರಕ್ಕೆ ಹೊಸದಾಗಿ ಸುದೀರ್ಘ ಅಧಿವೇಶನದ ಕಾಯುವಿಕೆಯಿಲ್ಲದೆ, ನೇರವಾಗಿ ವಿಶೇಷ ಕಲಾಪ ಕರೆಯಲು ದಾರಿ ಮಾಡಿಕೊಟ್ಟಿದೆ. ಅಕ್ಟೋಬರ್ 26 ಮತ್ತು 27 ರಂದು ಸಂವಿಧಾನ್ ಸದನದಲ್ಲಿ 12ನೇ ಬ್ರಿಕ್ಸ್ (BRICS) ಸಂಸದೀಯ ವೇದಿಕೆ ನಡೆಯಲಿರುವ ಕಾರಣ, ಅದಕ್ಕೂ ಮುನ್ನ ಕೇವಲ 2-3 ದಿನಗಳ ನೋಟಿಸ್ ನೀಡಿ ವಿಶೇಷ ಅಧಿವೇಶನ ಆರಂಭಿಸುವ ಸಾಧ್ಯತೆಯಿದೆ.

ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸುವ ಐತಿಹಾಸಿಕ ಮಸೂದೆಯು ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಅಂಗೀಕಾರಗೊಳ್ಳಲಿದೆಯೇ ಎಂಬುದು ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರೀಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಸಿದೆ.

#WomenReservationBill #SpecialParliamentSession #Delimitation #UdayakalaNews #NarendraModi #IndianPolitics #ParliamentNews #LokSabha #WomenEmpowerment #DelhiNewsKannada

Related Posts

Leave a Reply

Your email address will not be published. Required fields are marked *