Thursday, October 15, 2026
Menu

ಸಚಿವ ಸಂಪುಟದಿಂದ ರಿಂಗ್‌ ರೋಡ್‌ ಶುಭಾ ಕ್ಷಮಾದಾನ ಅರ್ಜಿ ತಿರಸ್ಕೃತ : ಜೀವಾವಧಿ ಶಿಕ್ಷೆ ಮುಂದುವರಿಕೆ!

ಉದಯಕಾಲ ನ್ಯೂಸ್,ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ, ಬಹುಚರ್ಚಿತ ‘ರಿಂಗ್ ರೋಡ್ ಶುಭಾ’ (Ring Road Shubha Case) ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಭಾವಿ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಶುಭಾ ಶಂಕರನಾರಾಯಣ ಹಾಗೂ ಆಕೆಯ ಸಹಚರ ಡಿ. ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಅಧಿಕೃತವಾಗಿ ತಿರಸ್ಕರಿಸಿದೆ.

ಜೈಲಿನಲ್ಲಿ ಸನ್ನಡತೆ ಆಧರಿಸಿ ತಮ್ಮ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆ ಮಾಡುವಂತೆ ಕೋರಿ ಅಪರಾಧಿಗಳು ರಾಜ್ಯಪಾಲರ ಮುಂದೆ ಕ್ಷಮಾದಾನ ಅರ್ಜಿ (Clemency Plea) ಸಲ್ಲಿಸಿದ್ದರು. ಈ ಕುರಿತು ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಹಾಗೂ ವರದಿಯನ್ನು ಕೋರಿದ್ದರು. ಸಚಿವ ಸಂಪುಟ ಸಭೆಯಲ್ಲಿ ಈ ಕಡತದ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಲಾಗಿದ್ದು, ಅಪರಾಧಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು ಎಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಸಂವಿಧಾನದ 161ನೇ ವಿಧಿಯಡಿ ಸಂಪುಟದ ಈ ತೀರ್ಮಾನವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು.

ಪ್ರಕರಣದ ಹಿನ್ನೆಲೆ ಏನು?

2003ರ ನವೆಂಬರ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ಶಂಕರನಾರಾಯಣ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಶುಭಾಳ ಮತ್ತೊಬ್ಬ ಗೆಳೆಯ ಅರುಣ್ ವರ್ಮನೊಂದಿಗೆ ಹೊಂದಿದ್ದ ಪ್ರೇಮ ಸಂಬಂಧ ಹಾಗೂ ಮದುವೆಯಾಗುವ ದುರುದ್ದೇಶದಿಂದ ಗಿರೀಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು.

ಡಿಸೆಂಬರ್ 3, 2003ರ ರಾತ್ರಿ ವಿಮಾನ ನಿಲ್ದಾಣದ ಬಳಿ ದೃಶ್ಯ ತೋರಿಸುವ ನೆಪದಲ್ಲಿ ಗಿರೀಶ್ ಅವರನ್ನು ರಿಂಗ್ ರೋಡ್‌ಗೆ ಕರೆದೊಯ್ದು, ಪೂರ್ವಯೋಜಿತ ಸಂಚಿನಂತೆ ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಎ.ನಾನಯ್ಯ ಅವರು ಮೊಬೈಲ್ ಕರೆಗಳ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಿ ಜಾಲವನ್ನು ಬಯಲಿಗೆಳೆದಿದ್ದರು.

2010ರಲ್ಲಿ ಸ್ಥಳೀಯ ನ್ಯಾಯಾಲಯ ಹಾಗೂ ಬಳಿಕ ಹೈಕೋರ್ಟ್ ಶುಭಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸುದೀರ್ಘ ಕಾನೂನು ಹೋರಾಟದ ಬಳಿಕ 2025ರ ಜುಲೈ 14ರಂದು ಸುಪ್ರೀಂ ಕೋರ್ಟ್ ಕೂಡ ನಾಲ್ವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಪ್ರಸ್ತುತ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿರುವುದರಿಂದ ಅಪರಾಧಿಗಳ ಕಾನೂನು ಹೋರಾಟಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಜೈಲುವಾಸ ಮುಂದುವರಿಯಲಿದೆ.
#RingRoadShubha #CrimeNews #KarnatakaCabinet #ClemencyRejected #SupremeCourt #BangaloreNews #Udayakala #LegalUpdate #GirishMurderCase

Related Posts

Leave a Reply

Your email address will not be published. Required fields are marked *