Wednesday, October 14, 2026
Menu

ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಲಿ ಹಾಕಬೇಕು: ಸಚಿವ ಎಂ.ಬಿ. ಪಾಟೀಲ್ ಆಕ್ರೋಶ

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ (Sting Operation) ವಿಚಾರಕ್ಕೆ ಸಂಬಂಧಿಸಿದಂತೆ ಕಟು ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಎಂ.ಬಿ. ಪಾಟೀಲ್ (MB Patil), “ಸ್ಟಿಂಗ್ ಆಪರೇಷನ್ ಯಾರೇ ಮಾಡಿರಲಿ, ಅದು ದೊಡ್ಡ ತಪ್ಪು. ಅಂತಹವರನ್ನು ಬಲಿ ಹಾಕಬೇಕು” ಎಂದು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಎಂಬುದು ಅತ್ಯಂತ ಕೆಟ್ಟ ಚಾಳಿಯಾಗಿದ್ದು, ರಾಜಕೀಯ ಪೈಪೋಟಿ ಹೇಗೇ ಇರಲಿ, ಇಂತಹ ಕೃತ್ಯಗಳನ್ನು ಎಸಗುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಚಾರಿತ್ರ್ಯವಧೆ ಯತ್ನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯುತ್ತಮ ಹಾಗೂ ಜನಪ್ರಿಯ ನಾಯಕರಾಗಿದ್ದು, ಅವರ ವಿರುದ್ಧ ವ್ಯವಸ್ಥಿತವಾಗಿ ಚಾರಿತ್ರ್ಯವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಎಂ.ಬಿ. ಪಾಟೀಲ್ ಆರೋಪಿಸಿದರು. ಈ ರೀತಿಯ ಸ್ಟಿಂಗ್ ಆಪರೇಷನ್‌ಗಳನ್ನು ಕರ್ನಾಟಕದಿಂದ ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ರಾಜಕೀಯವಾಗಿ ಅಥವಾ ಹಣಕಾಸಿನ ಲಾಭಕ್ಕಾಗಿ ದೇಶ-ವಿದೇಶಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು, ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಂದ್ರದ ವಿರುದ್ಧ ಆಕ್ರೋಶ

ಇದೇ ವೇಳೆ ರಾಜ್ಯದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಮಾತನಾಡಿದ ಸಚಿವರು, ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದರು. ಎಂಎಸ್‌ಪಿ (MSP) ಹಾಗೂ ಎಫ್‌ಆರ್‌ಪಿ (FRP) ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಅಡಿಯಲ್ಲೇ ಬರುತ್ತದೆ. ಕೇಂದ್ರದ ಸೂಚನೆಯ ಮೇರೆಗೆ ರೈತರು ಎಥನಾಲ್ ಉತ್ಪಾದನೆ ಮಾಡಿದ್ದರು, ಆದರೆ ಈಗ ಕೇಂದ್ರ ಸರ್ಕಾರವೇ ಎಥನಾಲ್ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿ ಪ್ರತಿಭಟನೆ ನಡೆಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ರೈತರನ್ನು ಕರೆದು ಮಾತುಕತೆ ನಡೆಸಬೇಕು. ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಮತ್ತು ಕಾರ್ಖಾನೆಗಳ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
#MBPatil #StingOperation #Siddaramaiah #KarnatakaPolitics #SugarcaneFarmers #MSP #CentralGovernment #VidhanaSouda #UdayakalaNews #PoliticalUpdates

Related Posts

Leave a Reply

Your email address will not be published. Required fields are marked *