Menu

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಎಚ್‌ಆರ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್!

ಉದಯಕಾಲ ನ್ಯೂಸ್‌, ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣಗಳು ಹಾಗೂ, ಅಸುರಕ್ಷತಾ ಘಟನಾವಳಿಗಳು ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಾರ್ಯನಿರ್ವಹಿಸುತ್ತಿರುವ ಆಹಾರ ಮತ್ತು ಪಾನೀಯ ಸೇವಾ ಸಂಸ್ಥೆಯೊಂದರಲ್ಲಿ 26 ವರ್ಷದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಅದೇ ಸಂಸ್ಥೆಯ ಮಾನವ ಸಂಪನ್ಮೂಲ (HR) ವ್ಯವಸ್ಥಾಪಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಕರಣದ ವಿವರ ಹಾಗೂ ಎಫ್‌ಐಆರ್‌ನಲ್ಲಿ ಏನಿದೆ?
ಪೊಲೀಸರ ಮಾಹಿತಿ ಹಾಗೂ ಎಫ್‌ಐಆರ್ ಪ್ರಕಾರ, ಸಂತ್ರತ ಮಹಿಳೆಯು ಈ ವರ್ಷದ ಮೇ ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿರುವ ಆ ಸಂಸ್ಥೆಯ ಗ್ರಾಹಕ ಸೇವಾ ವಿಭಾಗಕ್ಕೆ ಉದ್ಯೋಗಿಯಾಗಿ ಸೇರಿದ್ದರು. ಆರೋಪಿಯಾದ ಎಚ್‌ಆರ್ ಮ್ಯಾನೇಜರ್ ಉದ್ಯೋಗಿಯ ಮೇಲಧಿಕಾರಿಯಾಗಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡು ಪರಿಶೀಲಿಸುವುದು, ಇತರ ಸಿಬ್ಬಂದಿಯೊಂದಿಗೆ ಮಾತನಾಡದಂತೆ ನಿರ್ಬಂಧಿಸುವುದು ಹಾಗೂ ಮೈಮೇಲಿರುವ ಟ್ಯಾಟೂ (Tattoo) ತೋರಿಸುವಂತೆ ಅನುಚಿತವಾಗಿ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 24 ಮತ್ತು 30ರ ಕರಾಳ ಘಟನೆ
ಕಳೆದ ಸೆಪ್ಟೆಂಬರ್ 24ರಿಂದ ಆರೋಪಿ ತಮಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ತಮ್ಮ ವೈಯಕ್ತಿಕ ಖಾಸಗಿತನವನ್ನು ಗಂಭೀರವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅದೇ ರೀತಿ ಸೆಪ್ಟೆಂಬರ್ 30ರಂದು ಇನ್ನಷ್ಟು ಅತಿರೇಕಕ್ಕೆ ಹೋದ ಆರೋಪಿ, ಆಕೆಯನ್ನು ಕೆಲಸದ ಸ್ಥಳದಲ್ಲಿರುವ ಪ್ರತ್ಯೇಕ ಕೋಣೆಯೊಂದಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ತಾನು ಬಟ್ಟೆ ಕಳಚಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಲ್ಲದೆ, ಆಕೆಯೂ ಹಾಗೆಯೇ ಮಾಡುವಂತೆ ಬಲವಂತಪಡಿಸಿದ್ದಾನೆ ಎಂದು ಅತ್ಯಂತ ಆಘಾತಕಾರಿ ಸಂಗತಿಯನ್ನು ದೂರಿನಲ್ಲಿ ವಿವರಿಸಲಾಗಿದೆ.
ಈ ಅಮಾನವೀಯ ಕೃತ್ಯದಿಂದ ಭಯಭೀತರಾದ ದೂರುದಾರರು ಕೂಡಲೇ ಆ ಕೋಣೆಯಿಂದ ಹೊರಬಂದು, ನಡೆದ ಘಟನೆಯ ಬಗ್ಗೆ ತಮ್ಮ ಸ್ನೇಹಿತರಿಗೆ ತಿಳಿಸಿ ಅವರ ಸಲಹೆ ಪಡೆದಿದ್ದಾರೆ. ಬಳಿಕ ಧೈರ್ಯ ಮಾಡಿ ಬಿಐಎಎಲ್ (BIAL) ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ.

ಪೊಲೀಸರ ಕಾನೂನು ಕ್ರಮ

ಮಹಿಳೆಯ ದೂರಿನ ಆಧಾರದ ಮೇಲೆ, ಆರೋಪಿ ಎಚ್‌ಆರ್ ಮ್ಯಾನೇಜರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(2) (ಹಿಂಬಾಲಿಸುವುದು ಅಥವಾ ಸ್ಟಾಕಿಂಗ್) ಹಾಗೂ ಸೆಕ್ಷನ್ 79 (ಮಹಿಳೆಯ ಘನತೆ ಅಥವಾ ಮರ್ಯಾದೆಗೆ ಧಕ್ಕೆ ತರುವ ಉದ್ದೇಶದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರು ಆರೋಪಿ ಎಚ್‌ಆರ್ ಮ್ಯಾನೇಜರ್‌ಗೆ ನೋಟಿಸ್ ಜಾರಿಗೊಳಿಸಿದ್ದು, ಠಾಣೆಗೆ ಕರೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಂತಹ ಅತ್ಯುನ್ನತ ಭದ್ರತಾ ವಲಯದಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಎಚ್‌ಆರ್ ಅಧಿಕಾರಿಯಿಂದಲೇ ಇಂತಹ ಕೃತ್ಯ ನಡೆದಿರುವುದು ದೊಡ್ಡ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
#BengaluruAirport #BIAL #SexualHarassment #HRManager #BanglaoreNews #KIAL #WomenSafety #BNS #KarnatakaPolice #UdayakalaNews

Related Posts

Leave a Reply

Your email address will not be published. Required fields are marked *