ಉದಯಕಾಲ ನ್ಯೂಸ್, ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಮಗೆ ಯಾವುದೇ ರಹಸ್ಯ ಸಭೆಯ ಅಗತ್ಯವಿಲ್ಲ. ಅವರು ನಮ್ಮ ಪಕ್ಷದ ಅಗ್ರಗಣ್ಯ ಮುಖಂಡರು, ನಾವು ಯಾವಾಗ ಬೇಕಾದರೂ ಅವರನ್ನು ಮುಕ್ತವಾಗಿ ಭೇಟಿಯಾಗಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಭೇಟಿ ಮಾಡಿರುವುದನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ನಾವು ಕಡಿಮೆ ಸಂಖ್ಯೆಯಲ್ಲೇ ಭೇಟಿಯಾಗುತ್ತಿದ್ದೆವು. ಹಾಗಾಗಿ ಈ ಭೇಟಿಯಲ್ಲಿ ಯಾವುದೇ ಗುಪ್ತ ಅಥವಾ ರಹಸ್ಯ ವಿಷಯವಿಲ್ಲ ಎಂದರು.
ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆ
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ (Sting Operation) ವಿಚಾರದ ಕುರಿತು ಮಾತನಾಡಿದ ಸಚಿವರು, “ಹೌದು, ಪ್ರಸ್ತುತ ರಾಜ್ಯದಲ್ಲಿ ಸ್ಟಿಂಗ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ನಡೆಯಬಹುದು, ಎಲ್ಲರೂ ಹುಷಾರಾಗಿರಿ ಎಂದು ಮುಖ್ಯಮಂತ್ರಿಗಳೇ ನಮಗೆ ಎಚ್ಚರಿಕೆ ನೀಡಿದ್ದಾರೆ. ಬೇರೆ ಬೇರೆ ವೇಷಗಳಲ್ಲಿ ಬಂದು, ಆಕರ್ಷಿಸಿ, ಟ್ರ್ಯಾಪ್ ಮಾಡುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದ್ದಾರೆ” ಎಂದರು.
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೂ ಈ ಸ್ಟಿಂಗ್ ಆಪರೇಷನ್‌ಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಅದರ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ನಮಗೆ ಸಿಎಂ ಹೇಳಿರುವುದು ಇಷ್ಟೇ; ಸ್ಟಿಂಗ್ ಆಗಬಹುದು, ಎಚ್ಚರಿಕೆಯಿಂದ ಇರಿ ಅಂತ. ವೈಯಕ್ತಿಕವಾಗಿ ನನಗೆ ಈವರೆಗೂ ಅಂತಹ ಯಾವುದೇ ಅನುಭವವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸತೀಶ್ ಜಾರಕಿಹೊಳಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಲು ಮುಂದಾದರೆ, ಮುಂದೊಂದು ದಿನ ಇದು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಭುಗಿಲೇಳಲಿದೆ” ಎಂದು ಗಂಭೀರ ಎಚ್ಚರಿಕೆ ನೀಡಿದರು.
ಸಿಜೆಪಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ಸಿಜೆಪಿ ನಾಯಕರನ್ನು ಕರೆದು ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಹಿಂದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲೂ ಇದೇ ರೀತಿಯ ಬೆಳವಣಿಗೆಗಳು ನಡೆದಿದ್ದವು. ಈಗ ಸ್ವತಃ ಬಿಜೆಪಿಯ ಸಮರ್ಥಕರೂ ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. ಇಂತಹದೊಂದು ದುಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ ಎಂಬುದನ್ನು ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೊಲೀಸರ ಬಲಪ್ರಯೋಗದಿಂದ ಎಲ್ಲವನ್ನೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
#SatishJarkiholi #Siddaramaiah #KarnatakaPolitics #StingOperation #CJPProtest #Belagavi #Congress #DKShivakumar #JantarMantar #PoliticalNews


