Thursday, October 08, 2026
Menu

ಎಂಎಲ್‌ಎ ಲೆಟರ್‌ಹೆಡ್‌ನಲ್ಲೇ ‘ಜೀವಂತವಿದ್ದರೂ ಮೃತ’ ಎಂದು ಸುಳ್ಳು ಅರ್ಜಿ: ಯತ್ನಾಳ್‌ ಸೇರಿ ಮೂವರ ವಿರುದ್ಧ ಎಫ್‌ಐಆರ್!

ಉದಯಕಾಲ ನ್ಯೂಸ್‌, ವಿಜಯಪುರ: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ, ವಿಜಯಪುರದಲ್ಲಿ ದೊಡ್ಡ ಮಟ್ಟದ ವಿವಾದವೊಂದು ಭುಗಿಲೆದ್ದಿದೆ. ಜೀವಂತವಾಗಿರುವ ಮತದಾರರು ಮೃತಪಟ್ಟಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ, ಶಾಸಕರ ಅಧಿಕೃತ ಲೆಟರ್‌ಹೆಡ್‌ ಬಳಸಿಕೊಂಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಅರ್ಜಿ ಸಲ್ಲಿಸಿದ ಆರೋಪದ ಮೇಲೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಕ್ಷಮ್ಯ ಪ್ರಕರಣ
ವಿಜಯಪುರ ನಗರದ ಬಾಗವಾನ್ ಕಾಲೋನಿಯ ನಿವಾಸಿ ಅಬ್ದುಲ್ ರಝಾಕ್ ಮೌಲಾಸಾಬ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಜೀವಂತವಾಗಿರುವ ಎಂಟು ಜನ ಮತದಾರರು ಹಾಗೂ ಇತರರನ್ನು ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ನಕಲಿ ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬೆಂಬಲಿಗರು ಕಳೆದ ಸೆಪ್ಟೆಂಬರ್ 3 ರಂದು ಈ ಸುಳ್ಳು ದಾಖಲೆಗಳನ್ನು ವಿಜಯಪುರ ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿ, ಶಾಸಕರ ಅಧಿಕೃತ ಲೆಟರ್‌ಹೆಡ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿದ್ದರು ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಈ ಅಕ್ರಮದ ಕುರಿತು ಮಾಧ್ಯಮವೊಂದು ಸ್ವತಂತ್ರವಾಗಿ ಮರಣ ಪ್ರಮಾಣಪತ್ರಗಳನ್ನು ಪರಿಶೀಲಿಸಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯರು ಹಾಗೂ ಬಾಧಿತ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು, ತಾವು ಜೀವಂತವಾಗಿದ್ದರೂ ತಮ್ಮನ್ನು ಮೃತಪಟ್ಟಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿರುವುದನ್ನು ಖಂಡಿಸಿ ಜಲನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಸದ್ಯ ಪೊಲೀಸರು ದೂರು ಸ್ವೀಕರಿಸಿ ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
#Vijayapura #BasanagoudaPatilYatnal #FIR #VoterListRow #KarnatakaNews #SIR #UdayakalaNews #PoliticalControversy

Related Posts

Leave a Reply

Your email address will not be published. Required fields are marked *