Saturday, October 03, 2026
Menu

ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ – ನಾಲ್ವರು ಸಾವು

ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ – ನಾಲ್ವರು ಸಾವು

ಅಮರಾವತಿ:ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಸಿಟಿ ವಿಶೇಷ ಆರ್ಥಿಕ ವಲಯದಲ್ಲಿರುವ ಖಾಸಗಿ ಔಷಧ ತಯಾರಿಕಾ ಘಟಕದಲ್ಲಿ (Pharma Facility) ಶನಿವಾರ ಬೆಳಿಗ್ಗೆ ನೀರಿನ ಬಾಯ್ಲರ್ ಭೀಕರವಾಗಿ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಬೆಳಗ್ಗೆ ಸುಮಾರು 8 ಗಂಟೆಯ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ದುರ್ಘಟನೆಯಲ್ಲಿ ಸಿಲುಕಿದ್ದಾರೆ. ಸ್ಫೋಟದ ತೀವ್ರತೆಗೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇತರ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಹಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಸ್ಫೋಟಕ್ಕೆ ನಿಖರವಾದ ಕಾರಣವೇನು ಎಂಬುದು ತನಿಖೆಯ ಬಳಿಕಷ್ಟೇ ತಿಳಿದುಬರಬೇಕಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾಪ
ಈ ದುರ್ಮರಣದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವ ಅವರು, ಸಂತ್ರಸ್ತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ನೆರವು ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಇಂತಹ ದುರಂತಗಳು ಮರುಕಳಿಸದಂತೆ ಕೈಗಾರಿಕಾ ಘಟಕಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮಹಿಳೆಯನ್ನು ಕೃಷ್ಣವೇಣಿ ಎಂದು ಗುರುತಿಸಲಾಗಿದ್ದು, ಮೃತರ ಹಾಗೂ ಗಾಯಗೊಂಡವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ.
#AndhraPradesh #Tirupati #SriCity #BoilerBlast #PharmaFacility #ChandrababuNaidu #UdayakalaNews #AccidentNews

Related Posts

Leave a Reply

Your email address will not be published. Required fields are marked *